ಪಿಸ್ತೂಲ್ ತೋರಿಸಿದವರ ಹೆಡೆಮುರಿ ಕಟ್ಟಿದ ಅಥಣಿ ಪೊಲೀಸ್…!
ಬೆಳಗಾವಿ : ಪಿಸ್ತೂಲ್ ತೋರಿಸಿ ಅಥಣಿ ಪಟ್ಟಣದ ತ್ರಿಮೂರ್ತಿ ಚಿನ್ನಾಭರಣ ಮಾರಾಟ ಮಳಿಗೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಪಿಸ್ತೂಲ್ ಹಾಗೂ ಏಳು ಜೀವಂತ ಗುಂಡು ವಶಪಡಿಸಿಕೊಳ್ಳುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆ. 26 ರಂದು ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್ ಹಾಕಿ ಚಿನ್ನಾಭರಣ ಮಾರಾಟ ಮಳಿಗೆಗೆ ನುಗ್ಗಿ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಮಹಾರಾಷ್ಟ್ರ ಮೂಲದ ವಿಜಯ್ ಜಾವೀರ ಹಾಗೂ ಯಶವಂತ ಗುರವ್ ಬಂಧಿತ ಆರೋಪಿಗಳು.
ಇಬ್ಬರು ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಯಾವುದೇ ಸುಳಿವು ನೀಡದೆ ಆರೋಪಿಗಳು ಪರಾಗಿದ್ದ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ್ ಮಾತನಾಡಿ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದು ತನಿಖೆ ಮುಂದುವರಿದಿದೆ. ಪ್ರಮುಖ ಆರೋಪಿ ವಿಜಯ್ ಮೇಲೆ ಕೊಲೆ ಆರೋಪ ಇದ್ದು, ಇವರಿಂದ ಎರಡು ಪಿಸ್ತೂಲ್ ಹಾಗೂ ಏಳು ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಜಿ.ಎಸ್ ಉಪ್ಪಾರ, ಮಲ್ಲಿಕಾರ್ಜುನ ತಳವಾರ ಹಾಗೂ ಕುಮಾರ್ ಹಾಡಕರ ಸೇರಿದಂತೆ ಸಿಬ್ಬಂದಿ ವರ್ಗದ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ.

