ಜಿಲ್ಲೆಯಾದ್ಯಂತ ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ
ಬೆಳಗಾವಿ : ನಾಗರ ಪಂಚಮಿ ಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ಸಡಗರದಿಂದ ಹಬ್ಬದ ಆಚರಣೆ ನಡೆಯಿತು. ಮನೆ ಮನೆಗಳಲ್ಲಿ ನಾಗರ ಮಣ್ಣಿನ ಮೂರ್ತಿಗೆ ಹಾಲು ಎರೆದು ಸಹಿ ಪದಾರ್ಥಗಳ ನೈವೇದ್ಯ ಅರ್ಪಿಸುವ ಮೂಲಕ ಜನ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಅಥಣಿಯಲ್ಲಿ ಸಂಭ್ರಮದ ಹಬ್ಬ ಆಚರಣೆ : ಶ್ರಾವಣ ಮಾಸದ ಮೊದಲ ಹಬ್ಬ ನಾಗಚೌತಿ ಮತ್ತು ನಾಗ ಪಂಚಮಿಯನ್ನು ಅಥಣಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ಮತ್ತು ಮಂಗಳವಾರ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸಂಭ್ರಮದಿಂದ ಆಚರಿಸಿದರು.
ಸೋಮವಾರ ಸಾಯಂಕಾಲ ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಅಳಿಟ್ಟಿ ನಿಂದ ಅಥವಾ ಮಣ್ಣಿನಿಂದ ತಯಾರಿಸಿದ ನಾಗದೇವರಿಗೆ ಹಾಲನ್ನು ಎರೆಯುವ ಮೂಲಕ ನಾಗದೇವರಿಗೆ ತಮ್ಮ ಭಕ್ತಿಯನ್ನು ಅರ್ಪಿಸಿದರು.
ಮಂಗಳವಾರ ಮುಂಜಾನೆ ಮನೆಯ ಮುಂದೆ ಆಕಳು ಸಗಣಿ ಸಾರಿಸಿ ನಾಗದೇವರ ಚಿತ್ರದ ರಂಗೋಲಿ ಗಳನ್ನು ಬಿಡಿಸಿದ ದೃಶ್ಯಗಳು ಕಂಡು ಬಂದವು. ಮನೆಯಲ್ಲಿ ವಿವಿಧ ಸಿಹಿ ಖಾದ್ಯಗಳನ್ನು ತಯಾರಿಸಿ ಒಬ್ಬರಿಗೊಬ್ಬರು ಪರಸ್ಪರ ಹಂಚಿಕೊಂಡು ನಾಗರಹ ಹಬ್ಬದ ಶುಭಾಶಯಗಳು ಕೋರಿದರು.


