ಒಳ್ಳೆಯ ವಿಷಯ ವಿಸ್ತಾರಗೊಳಿಸುವಲ್ಲಿ ಮಾಧ್ಯಮದ ಪಾತ್ರ ಅಪಾರ : ಪ್ರೊ. ಎಸ್ ವಿದ್ಯಾಶಂಕರ್
ಬೆಳಗಾವಿ : ಯುದ್ಧದ ಪರಿಸ್ಥಿತಿ, ಪ್ರವಾಹ ಸೇರಿದಂತೆ ಹಲವಾರು ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್ ವಿದ್ಯಾಶಂಕರ ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ರವಿವಾರ ನಗರದ ಕನ್ನಡ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ: ಹಿರಿಯ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಒಂದು ಸಣ್ಣ ತಪ್ಪು ಎತ್ತಿಕೊಂಡು ಇಡೀ ಪತ್ರಿಕಾ ಮಾಧ್ಯಮವನ್ನು ಗುರಿಯಾಗಿಸುವುದು ತಪ್ಪು. ಒಳ್ಳೆಯ ವಿಷಯವನ್ನು ವಿಸ್ತಾರವಾಗಿಸುವ ಶಕ್ತಿ ಮಾಧ್ಯಮಕ್ಕೆ ಇದೆ. ಪತ್ರಿಕಾ ರಂದ ಯಾವುದೇ ಒತ್ತಡವಿಲ್ಲದ ಕಾರ್ಯ ನಡೆಸುವ ವ್ಯವಸ್ಥೆ ಹೆಚ್ಚಾಗಲಿ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಬಹಳಷ್ಟಿದೆ. ಕಲ್ಲೊಳ್ಳಿಯಂತಹ ಗ್ರಾಮೀಣ ಭಾಗದಿಂದ ಸಂಘಟನೆ ಮೂಲಕ ಕೆಲಸ ಮಾಡಿದ ನನ್ನನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಧ್ಯಮಗಳು ಮಾಡಿವೆ. ಸಮಾಜವನ್ನು ತಿದ್ದುವ ಶಕ್ತಿ ಮಾಧ್ಯಮಗಳು ಉಳಿಸಿಕೊಂಡು ಸಾಗುತ್ತಿವೆ ಎಂದರು.
ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ ಪಾಟೀಲ ಮಾತನಾಡಿ ಮುಖ್ಯಮಂತ್ರಿ ಪತ್ರಕರ್ತರ ಸಂಜೀವಿನಿ ವಿಮಾ ಯೋಜನೆ ಜಾರಿಗೆ ತಂದಿರುವುದು ಸಂತಸದ ವಿಷಯ.
ಮುಂದಿನ ದಿನಗಳಲ್ಲಿ ಪತ್ರಕರ್ತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗುವ ಬಡಾವಣೆಗಳಲ್ಲಿ ಪತ್ರಕರ್ತರಿಗೆ 10% ನಿವೇಶನಗಳನ್ನು ಮೀಸಲಿಡಬೇಕು. ಇದರಿಂದ ಸಮಾಜದ ಒಳಿತಿಗೆ ಹಗಲಿರುಳು ಶ್ರಮಿಸುವ ಪತ್ರಕರ್ತರಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಾಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಋಷಿಕೇಶ ಬಹದ್ದೂರ್ ದೇಸಾಯಿ, ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್, ಕಾನೂನು ಸುವ್ಯವಸ್ಥೆ ಡಿಸಿಪಿ ರೋಹನ್ ಜಗದೀಶ್, ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿದರು. ಈ ವೇಳೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಜು ಸೇಠ್, ಮಹಾಂತೇಶ್ ವಕ್ಕುಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪತ್ರಿಕಾ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಗಣ್ಯರು ಸನ್ಮಾನಿಸಿದರು. ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ವಿಜೇತ ತಂಡಗಳಿಗೆ ಟ್ರೋಫಿ ವಿತರಣಾ ಕಾರ್ಯಕ್ರಮ ಜರುಗಿತು.

