
ಗಡಿಯಲ್ಲಿ ಹೆಚ್ಚಾದ ಮರಾಠಿ ಪುಂಡರ ಹಾವಳಿ ; PDO ನಿಂದಿಸಿದ್ದ ಆರೋಪಿ ಅಂದರ್

ಬೆಳಗಾವಿ : ಗಡಿಯಲ್ಲಿ ಮರಾಠಿ ಭಾಷಿಕರ ಪುಂಡಾಟ ಮುಂದುವರಿದಿದ್ದು ಕಂಡಕ್ಟರ್ ಮೇಲಿನ ಹಲ್ಲೆ ಘಟನೆ ಮಾಸುವ ಮುನ್ನವೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ತಾಲೂಕಿನ ಕಿಣಯೇ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಕಿಣಯೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಪತ್ತಾರ ಬಳಿಬಂದ ಮರಾಠಿ ಭಾಷಿಕ ಯುವಕ ತಿಪ್ಪಣ್ಣ ಸುಭಾಷ ಡೊಕ್ರೆ ಎಂಬಾತ ಜಗಳಕ್ಕೆ ಇಳಿದಿದ್ದಾನೆ. ಮರಾಠಿ ಭಾಷೆಯಲ್ಲಿ ದಾಖಲಾತಿ ನೀಡುವಂತೆ ಆಗ್ರಹಿಸಿದ್ದಾನೆ. ಇದಕ್ಕೆ ಪಿಡಿಒ ನಿರಾಕರಣೆ ಮಾಡಿದಾಗ ಕನ್ನಡ ಮಾತನಾಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಿಣಯೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಪತ್ತಾರ. ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಪುಂಡಾಟ ಮೆರೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಕಾರದ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸಿದರು ತೊಂದರೆ ಮಾಡಲಾಗುತ್ತಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದು, ನಮಗೆ ಸೂಕ್ತ ರಕ್ಷಣೆ ನೀಡುವಂತೆ ಕೇಳಿಕೊಂಡರು.
ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ. ರಾಜ್ಯ ಸರಕಾರ ಕೇವಲ ಮಾತಿನಲ್ಲೇ ಕನ್ನಡ ಉಳಿಸುವ ಮಾತನಾಡುತ್ತಿದೆ ಹೊರತು ಕನ್ನಡಿಗರಿಗೆ ಅನ್ಯಾವಾಗುವುದನ್ನು ತಡೆಯುತ್ತಿಲ್ಲ. ಗಡಿ ಭಾಗದಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ಮರಾಠಿ ಪುಂಡರು ದೌರ್ಜನ್ಯ ಎಸಗುತ್ತಿದ್ದು ಸರಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪುಂಡನ ಬಂಧನ : ಮರಾಠಿ ಮತನಾಡುವಂತೆ ಆಗ್ರಹಿಸಿ ಕಿಣಯೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ ತಿಪ್ಪಣ್ಣ ಡೊಕ್ರೆಯನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿಣಯೇ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಪತ್ತಾರ ಎಂಬುವವರಿಗೆ ಮರಾಠಿ ಮಾತನಾಡುವಂತೆ ಆಗ್ರಹಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.