ಪ್ರೀತ್ಸೇ..ಪ್ರೀತ್ಸೇ.. ಅಂತ ನರ್ಸ್ ಹಿಂದೆ ಬಿದ್ದವನಿಂದ ದಾಳಿ ; ಆಸ್ಪತ್ರೆಯಲ್ಲೇ ಸುರಿದ ನೆತ್ತರು..!
ಬೆಳಗಾವಿ : ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಗೆ ಪ್ರೀತಿಸುವಂತೆ ಕಾಡುತ್ತಿದ್ದ ಪಾಗಲ್ ಪ್ರೇಮಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಅಕ್ಟೋಬರ್ 30 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿತ ಪ್ರಕಾಶ್ ಜಾಧವ್ ಎಂಬಾತ ಪ್ರೀತಿ ಮಾಡುವಂತೆ ನರ್ಸ್ ಹಿಂದೆ ಬಿದ್ದಿದ್ದ. ಇದಕ್ಕೆ ಒಪ್ಪದಿದ್ದ ಸಂದರ್ಭದಲ್ಲಿ ಆರೋಪಿ ಆಸ್ಪತ್ರೆಗೆ ನುಗ್ಗಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಕಾಶ್ ಜಾಧವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈ ಘಟನೆಯಲ್ಲಿ ಹಲ್ಲೆಗೊಳಗಾದ ನರ್ಸ್ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತನ್ನ ಮಗಳ ಮೇಲೆ ನಡೆದಿರುವ ಹಲ್ಲೆ ಹಾಗೂ ಕುಟುಂಬಕ್ಕೆ ಆರೋಪಿ ಜೀವ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಮನನೊಂದು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ
ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ. ಈಗಾಗಲೇ ಆರೋಪಿಯನ್ನ ಬಂಧಿಸಿ ತನಿಖೆ ಮಾಡುತ್ತಿದ್ದೇವೆ. ಯುವತಿಗೆ ಜೀವ ಭಯ ಇದ್ದರೆ ಅವರಿಗೆ ರಕ್ಷಣೆ ಕೊಡುತ್ತೇವೆ. ಹುಡಗ, ಹುಡಗಿ ನಡುವೆ ವೈಯಕ್ತಿಕ ವಿಚಾರಕ್ಕೆ ಗೊಂದಲ ಇತ್ತು. ಹುಡುಗಿ ಪ್ರೀತಿಗೆ ನಿರಾಕರಣೆ ಮಾಡಿದ್ದಕ್ಕೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಸೂಕ್ತ ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ಕೊಡಿಸಲಾಗುವುದು ಎಂದರು.