ಚನ್ನಪಟ್ಟಣದಲ್ಲಿ ಡಿಕೆಶಿ ಧ್ವಜಾರೋಹಣ ; ಹೆಚ್ಡಿಕೆ ಅಡ್ಡಾದಲ್ಲಿ ಸಿಡಿದ ಬಂಡೆ
ಬೆಂಗಳೂರು : ಮುಂಬರುವ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣಾ ಕಾವು ಜೋರಾಗಿದ್ದು ಗುರುವಾರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ 58 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ಮಾಡುವ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸೆಡ್ಡು ಹೊಡೆದಿದ್ದಾರೆ.
ಇದೇ ಮೊದಲಬಾರಿಗೆ ಡಿ.ಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮೊದಲು ಎರಡು ಅವಧಿಗೆ ಶಾಸಕರಾಗಿದ್ದ ಕುಮಾರಸ್ವಾಮಿ ಧ್ವಜಾರೋಹಣ ಮಾಡುತ್ತಿದ್ದರು. ಆದರೆ ಈ ಬಾರಿ ಗೌಡರ ಕಾಳಗ ಜೋರಾಗಿದ್ದು ಕನಕಪುರ ಬಂಡೆ ಧ್ವಜಾರೋಹಣ ನೆರವೇರಿಸುವ ಮೂಲಕ ಅಖಾಡಕ್ಕೆ ಮತ್ತಷ್ಟು ರಂಗು ಹೆಚ್ಚಿಸಿದ್ದಾರೆ.
ಚನ್ನಪಟ್ಟಣ ಉಪ ಚುನಾವಣಾ ಟಿಕೆಟ್ ಹಂಚಿಕೆಯ ವಿಷಯವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಗೊಂದಲ ಏರ್ಪಟ್ಟಿದೆ. ಮಾಜಿ ಸಚಿವ ಹಾಗೂ ಚಿತ್ರನಟ ಯೋಗೇಶ್ವರ್ ಈ ಬಾರಿ ಟಿಕೆಟ್ ಪಡೆಯಲು ಕಸರತ್ತು ಮುಂದುವರಿಸಿದ್ದಾರೆ. ಇತ್ತ ಜೆಡಿಎಸ್ ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ತಮ್ಮ ಬಳಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದೆ. ಎರಡೂ ಪಕ್ಷದ ನಾಯಕರು ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ.
ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ವಿರುದ್ಧ ಸೋತ ಡಿ.ಕೆ ಶಿವಕುಮಾರ್ ಸಹೋದರ ಸುರೇಶ್ ಚನ್ನಪಟ್ಟಣ ಉಪ ಕದನಕ್ಕೆ ಇಳಿಸುವ ಚಿಂತನೆಯಲ್ಲಿ ಕಾಂಗ್ರೆಸ್ ಇದೆ. ಈಗಾಗಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಸಾಕಷ್ಟು ಸುತ್ತಾಟ ನಡೆಸಿರುವ ಡಿಕೆಶಿ ಸಹೋದರನಿಗಾಗಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧರಾಗಿದ್ದಾರೆ.
ಇಂದಿನ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಕೆಶಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ. ಚನ್ನಪಟ್ಟಣದಲ್ಲಿ ಇಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದೆ.
ಬೊಂಬೆ ನಾಡು ಎಂದೇ ಪ್ರಖ್ಯಾತವಾಗಿರುವ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿದ್ದು ನಿಜಕ್ಕೂ ಖುಷಿ ತಂತು. ಇಲ್ಲಿನ ಜನರು ತೋರುತ್ತಿರುವ ಪ್ರೀತಿ, ಮಮಕಾರಕ್ಕೆ ಮನಸೋತಿದ್ದೇನೆ. ಚನ್ನಪಟ್ಟಣದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು, ಅದನ್ನು ಮಾಡಿಯೇ ತೀರುತ್ತೇವೆ.


