
ಕಟ್ಟಿಗೆ ಅಲ್ಲ ಲೇ ಇದು.. ಮೊಸಳೆ ಲೇ ಯಪ್ಪಾ ; ನದಿಯಲ್ಲಿ ತೇಲಿಬಂದ ಮೊಸಳೆ

ಬೈಲಹೊಂಗಲ : ಸಮೀಪದ ಮಾಟೊಳ್ಳಿ, ಮಲ್ಲೂರ, ಹೊಸೂರ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಬೃಹತ್ ಗಾತ್ರದ ಮೊಸಳೆಗಳು ಶನಿವಾರ ಪ್ರತ್ಯಕ್ಷಗೊಂಡಿದೆ.
ಕಣಕುಂಬಿ ಹಾಗೂ ಖಾನಾಪೂರ ಅರಣ್ಯ ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಮಲಪ್ರಭಾ ನದಿಯ ಒಡಲು ದಿನೇ, ದಿನೇ ಹೆಚ್ಚುತ್ತಿದ್ದು ಒಡಲು ತುಂಬಿ ಉಕ್ಕಿ ಹರಿಯುತ್ತಿದೆ.
ಹರಿಯುವ ನದಿಯ ನೀರಿನಲ್ಲಿ ಸರಾಗ ಹರಿದು ಬರುತ್ತಿರುವ ಬೃಹತ್ ಗಾತ್ರದ ಮೊಸಳೆಗಳು ನದಿ ಪಾತ್ರದ ಗ್ರಾಮಸ್ಥರಲ್ಲಿ, ರೈತರಲ್ಲಿ ಆತಂಕ ಸೃಷ್ಠಿಸಿವೆ.
ನದಿಯ ದಂಡೆಯ ಮೇಲೆ ಆಗಾಗ ಕಾಣ ಸಿಕೊಳ್ಳುತ್ತಿರುವ ಬೃಹತ್ ಗಾತ್ರದ ಮೊಸಳೆಗಳನ್ನು ಯುವಕರು ಮೊಬೈಲ್ ಕ್ಯಾಮೆರಾಗಳಲ್ಲಿ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.
ಮೊಸಳೆಗಳು ನದಿಯ ದಡದಲ್ಲಿ ವಿಶ್ರಮಿಸಿ ಮರಳಿ ನದಿಗೆ ಜಾರುವ ವಿಡಿಯೋ ದೃಶ್ಯ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿವೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನದಿ ಪಾತ್ರದಲ್ಲಿ ಕಾಣ ಸಿಕೊಳ್ಳುತ್ತಿರುವ ಮೊಸಳೆಗಳನ್ನು ಸೆರೆ ಹಿಡಿದು ಮುಂದಾಗುವ ಅನಾಹುತ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಹಶೀಲ್ದಾರ ಹನುಮಂತ ಶಿರಹಟ್ಟಿ, ಮುಖ್ಯಾಧಿಕಾರಿ ವಿರೇಶ ಹಸಬಿ ಸುದ್ದಿಗಾರರೊಂದಿಗೆ ಮಾತನಾಡಿ, ನದಿ ಪಾತ್ರದ ಗ್ರಾಮಸ್ಥರು, ರೈತರು ಜಾಗೃತಿವಹಿಸುವಂತೆ ಕೋರಿದ್ದಾರೆ.