ಮೃತ ಬಾಲಕಿ ಕುಟುಂಬಕ್ಕೆ ಸಹಾಯ ಕೋರಿದ ಮೋಹನ್ ಕುಮಾರ್
ಬೆಳಗಾವಿ : ಕಳೆದ ಕೆಲ ದಿನಗಳ ಹಿಂದೆ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಬಲಿಯಾದ ಅಮಾಯಕ ಬಾಲಕಿ ಅನುಷ್ಕಾಳ ಕುಟುಂಬಕ್ಕೆ ಮಾನವೀಯ ಕೈಗಳು ಆಸರೆಯಾಗಬೇಕಿದೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ದಿವ್ಯ ನಿರ್ಲಕ್ಷ್ಯದಿಂದಾಗಿ ಪುಟ್ಟ ಮಗು ಅನುಷ್ಕಾ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಳು.
ಕಿತ್ತು ತಿನ್ನುವ ಬಡತನದ ಕುಟುಂಬದ ಹೆಣ್ಣು ಮಗಳಾಗಿದ್ದ ಅನುಷ್ಕಾಳ ತಂದೆ-ತಾಯಿ ಹೊಟ್ಟೆಪಾಡಿನ ಕೂಲಿಗಾಗಿ ರಾಯಬಾಗ ತಾಲೂಕಿನಿಂದ ನಿಪ್ಪಾಣಿ ತಾಲೂಕಿನ ಡೋಣೆವಾಡಿಗೆ ಕುಟುಂಬ ಸಮೇತ ವಲಸೆ ಬಂದು ದಿನಗೂಲಿ ಜೀವನ ನಡೆಸುತ್ತಿದ್ದರು.
ಮೂರು ಹೆಣ್ಣು ಮಕ್ಕಳನ್ನು ಹೊಂದಿರುವ ಅನುಷ್ಕಾಳ ಕುಟುಂಬ ಈಗ ತಾನು ಮಾಡದ ತಪ್ಪಿಗೆ ಮಗಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆದು ಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಅಲ್ಲದೆ ಡೋಣೆವಾಡಿ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ನಿರ್ಲಕ್ಷ್ಯ ಧೋರಣೆಗೆ ಜಿಲ್ಲೆಯಲ್ಲದೆ ರಾಜ್ಯಾದ್ಯಂತ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ಹಾಗೂ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.
ಈ ಘಟನೆಗೆ ತಕ್ಷಣ ಸ್ಪಂದಿಸಿ ಕ್ರಮ ಕೈಗೊಂಡಿರುವ ಚಿಕ್ಕೋಡಿಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಮ್ಮಲ ಮರುಗಿದ್ದಲ್ಲದೆ ಸಹಾಯ ಹಸ್ತವನ್ನು ಚಾಚಿ ಮಾನವೀಯತೆ ಮೆರೆದಿದ್ದಾರೆ.
ಇನ್ನೂ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳೂ ಸಹ ಅನುಷ್ಕಾಳ ಕುಟುಂಬಕ್ಕೆ ನೆರವು ನೀಡಿದ್ದಾರೆ. ಸಾರ್ವಜನಿಕರೂ,ಸಂಘ ಸಂಸ್ಥೆಗಳೂ ಮುಂದಾಗಿ ಬಡಕುಟುಂಬಕ್ಕೆ ನೆರವಾಗುವಂತೆ ಚಿಕ್ಕೋಡಿ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೋಹನ್ ಕುಮಾರ್ ಹಂಚಾಟೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅನುಷ್ಕಾಳ ಕುಟುಂಬದಲ್ಲಿ ಇನ್ನೂ 2 ಜನ ಅವಳ ಸಹೋದರಿಯರಿದ್ದಾರೆ ಅಲ್ಲದೆ ಕಡು ಬಡತನದಲ್ಲಿರುವ ಕುಟುಂಬದ ಈ ನೋವಿನ ಸಮಯದಲ್ಲಿ ನಾವೆಲ್ಲರೂ ಮಾನವೀಯತೆ ಮೆರೆಯಬೇಕಾದ ಸಂದರ್ಭ ಎದುರಾಗಿದೆ.
ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿರುವ ಅನುಷ್ಕಾಳ ಸಾವಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕಾಗಿದೆ ಹಾಗೂ ಕುಟುಂಬವೂ ಆರ್ಥಿಕವಾಗಿ ಹಿಂದುಳಿದಿದೆ ಹೀಗಾಗಿ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ಕಣ್ಣೀರಿನಲ್ಲಿರುವ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಮೂಲಕ ಅವಳ ಕುಟುಂಬಕ್ಕೆ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಬೇಕಾಗಿದೆ.
ಸಹಾಯ ಮಾಡಲಿಚ್ಚಿಸುವವರು ಅನುಷ್ಕಾಳ ತಾಯಿಯ ಬ್ಯಾಂಕ್ ಖಾತೆ ಮಾಹಿತಿ ನೀಡಲಾಗಿದೆ ಅದನ್ನು ಬಳಸಿಕೊಂಡು ಸಹಾಯ ಮಾಡಬಹುದಾಗಿದೆ.
ಅಲ್ಲದೆ ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಬಡ ಕಂದಮ್ಮಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ ಎಂಬುದು ಎಲ್ಲರ ಆಶಯವಾಗಿದೆ.