ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆಗೆ ಸಿದ್ಧವಾಯ್ತು ವ್ಯೂಹ…!
ಬೆಂಗಳೂರು ; ಸ್ವಂತ ಪಕ್ಷದ ವಿರುದ್ಧ ಪದೇ, ಪದೇ ಆರೋಪ ಮಾಡುವ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಮಾಡಲು ತಯಾರಿ ನಡೆಸಿದ್ದಾರೆ ಎಂದುಬಿಜೆಪಿ ಮೂಲಗಳಿಂದ ಹೇಳಲಾಗುತ್ತಿದೆ.
ಸ್ವಪಕ್ಷೀಯರ ವಿರುದ್ಧವೇ ಪದೇಪದೇ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಮುಜುಗರ ಸೃಷ್ಟಿಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಅಮಾನತುಪಡಿಸುವ ಸಾಧ್ಯತೆಯಿದೆ. ನಿರಂತರವಾಗಿ ಪಕ್ಷದ ವಿರುದ್ಧ ಟೀಕೆ ಮಾಡುತ್ತಾ ವಿರೋಧ ಪಕ್ಷದವರಿಗೆ ಅಸ್ತ್ರ ನೀಡುತ್ತಿರುವ ಯತ್ನಾಳ್ ಹೇಳಿಕೆಯನ್ನು ರಾಜ್ಯ ಬಿಜೆಪಿ ಘಟಕ ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಅಮಾನತು ಮಾಡಲು ಕೇಂದ್ರ ಬಿಜೆಪಿ ನಾಯಕರಿಗೆ ಶಿಫಾರಸ್ಸು ಮಾಡಲು ಮುಂದಾಗಿದೆ.
ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಬೇರೆಯವರು ಕೂಡ ಇದೇ ಹಾದಿ ಹಿಡಿಯುವ ಸಾಧ್ಯತೆಯಿದೆ ಎಂಬುದನ್ನು ಮನಗಂಡು ಪಕ್ಷದ ಶಿಸ್ತು ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಯತ್ನಾಳ್ ಮೂಲಕವೇ ನೀಡಲಾಗುತ್ತದೆ.
ಅಮಾನತು ಮಾಡುವ ಮುನ್ನ ಕಾರಣ ಕೇಳಿ ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ನೋಟಿಸ್‍ಗೆ ಸಮರ್ಪಕ ಉತ್ತರ ಬಾರದಿದ್ದರೆ ಪಕ್ಷದಿಂದ ಅಮಾನತು ಮಾಡಲು ನಿರ್ಣಯವನ್ನು ರಾಜ್ಯಘಟಕ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ನಾಳೆ ಇತರರು ಕೂಡ ಇದೇ ಹಾದಿಯನ್ನು ತುಳಿಯುವ ಸಾಧ್ಯತೆ ಇರುವುದರಿಂದ ಭಿನ್ನಮತ ಉಲ್ಬಣಗೊಳ್ಳುವ ಮೊದಲೇ ಕಡಿವಾಣ ಹಾಕಲು ಮುಂದಾಗಿದೆ.
ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆ, ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಪಕ್ಷವನ್ನು ಸದೃಢಗೊಳಿಸುವತ್ತ ಬಿಜೆಪಿ ಹೆಜ್ಜೆ ಹಾಕುತ್ತಿದ್ದು, ಯತ್ನಾಳ್ ಹೇಳಿಕೆ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡಗಳು ಹೆಚ್ಚಾಗುತ್ತಿವೆ.


