ಡಿಸಿಸಿ ಗದ್ದುಗೆಗೆ ಹತ್ತಿರವಾದ ಸಾಹುಕಾರ್ ಬಣ ; 9 ಜನ ಅವಿರೋಧ ಆಯ್ಕೆ..!
ಬೆಳಗಾವಿ : ಡಿಸಿಸಿ ಬ್ಯಾಂಕ್ ನಿರ್ದೇಶಕ ಚುನಾವಣೆ ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಸೋಮವಾರ ಮಹತ್ವದ ಬೆಳವಣಿಗೆ ನಡೆದಿದ್ದು 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಬಣದ 7 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂ ಯಾವುದೇ ಬಣಕ್ಕೆ ಸೀಮಿತವಾಗದ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಅವಿರೋಧ ಆಯ್ಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಬಾಲಚಂದ್ರ ಜಾರಕಿಹೊಳಿ ಬಣದ ಸವದತ್ತಿ ವಿರೂಪಾಕ್ಷ ಮಾಮನಿ, ಯರಗಟ್ಟಿ ವಿಶ್ವಾಸ ವೈದ್ಯ, ಬೆಳಗಾವಿ ರಾಹುಲ್ ಜಾರಕಿಹೊಳಿ, ಗೋಕಾಕ್ ಅಮರನಾಥ ಜಾರಕಿಹೊಳಿ, ಮೂಡಲಗಿ ನೀಲಕಂಠ ಕಪ್ಪಲಗುದ್ದಿ, ಖಾನಾಪುರದಿಂದ ಅರವಿಂದ ಪಾಟೀಲ್, ಇತರೆ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ ಹಾಗೂ ಕಾಗವಾಡದಿಂದ ರಾಜು ಕಾಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅವರ ಸಂಧಾನದ ಫಲವಾಗಿ ಕಾಗವಾಡದ ಅಭ್ಯರ್ಥಿ ಶ್ರೀನಿವಾಸ ಪಾಟೀಲ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 19 ರಂದು ಅಥಣಿ, ರಾಯಬಾಗ, ನಿಪ್ಪಾಣಿ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು ಹಾಗೂ ರಾಮದುರ್ಗ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.


