ಸರಣಿ ಮನೆಗಳ್ಳತನಕ್ಕೆ ಹೈರಾಣಾದ ಬೈಲಹೊಂಗಲ ಜನ
ಬೈಲಹೊಂಗಲ- ತಾಲೂಕಿನ ನೇಸರಗಿಯ ಪೇಟೆ ಓಣಿಯಲ್ಲಿ ಸೋಮವಾರ ರಾತ್ರಿ ಸರಣಿ ಮನೆ ಕಳ್ಳತನ ನಡೆದಿದೆ. ದೀಪಾವಳಿ ಹಬ್ಬದ ಆಚರಣೆಗೆ ಬೇರೆ ಕಡೆ ತೆರಳಿದ ಕುಟುಂಬಗಳ ಬೀಗ ಹಾಕಿದ ಮನೆಗಳಿಗೆ ಹೊಂಚು ಹಾಕಿ ಕಳ್ಳರು ಲಕ್ಷಾಂತರ ರೂ. ಬೆಲೆ ಬಾಳುವ ಹಣ ಹಾಗೂ ಚಿನ್ನಾಭರಣಗಳನ್ನು ದೋಚಿ ಖದೀಮರು ಪರಾರಿಯಾದ ಘಟನೆ ನಡೆದಿದೆ.
ಗ್ರಾಮದ ಪ್ರಕಾಶ ಶಿವರುದ್ರಪ್ಪ ಹೊಸಮನಿ ಅವರ ಮನೆಯಲ್ಲಿ ಒಂದು ಲಕ್ಷ ಐದು ಸಾವಿರ ಬೆಳೆ ಬಾಳುವ ಚಿಣ್ಣ,ಬೆಳ್ಳಿಹಾಗೂ ಹಣವನ್ನು ದೋಚಿದ್ದು, ಡಾ.ಜಗದೀಶ ಗೆಜ್ಜಿ ಎಂಬವರ ಮನೆಯಲ್ಲಿ ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣವನ್ನು ಹಾಗೂ ಉತ್ತಮ ಮೇದಾರ ಅವರ ಮನೆಯಲ್ಲಿ ನಾಲ್ಕು ಲಕ್ಷ ಮೌಲ್ಯದ ಅಭರಣಗಳನ್ನು, ಸಿದ್ದಪ್ಪ ಇಂಚಲ, ನಿಂಗಯ್ಯ ಹಿರೇಮಠ, ನೀಲವ್ವ ಕಾಡಣ್ಣವರ ಮನೆಯಲ್ಲಿ ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ರವಿ ನಾಯ್ಕ, ನೇಸರಗಿ ಪೋಲಿಸ್ ಠಾಣೆ ಸಿಪಿಐ ರಾಘವೇಂದ್ರ ಹವಾಲ್ದಾರ, ಪಿಎಸ್ಐ ವೈ ಎಲ್.ಶೀಗಿಹಳ್ಳಿ, ಅಪರಾದ ವಿಭಾಗದ ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ, ಪೇದೆ ಎಸ್.ಬಿ.ಡೊಂಬರ ಭೇಟಿ ನೀಡಿ ಪರಿಶೀಲಿಸಿದರು. ನೇಸರಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.


