ಬಾಗಲಕೋಟೆ : ಇಸ್ಪೀಟ್ ಅಡ್ಡೆಯಾದ ಶಿವಪುರ ಗುಡ್ಡ ; ಕಣ್ಮುಚ್ಚಿ ಕುಳಿತ ಪೊಲೀಸರು
ಬಾಗಲಕೋಟೆ : ಬಾಗಲಕೋಟೆಯ ಶಕ್ತಿ ದೇವತೆ ಬನಶಂಕರಿ ತಾಯಿ ಪ್ರಸಿದ್ಧ ದೇವಸ್ಥಾನದ ಪಕ್ಕದಲ್ಲಿರುವ ಶಿವಪುರ ಗುಡ್ಡ ಇಸ್ಪೀಟ್ ಅಡ್ಡೆಯಾಗಿ ಬದಲಾಗಿದೆಯಾ ಎಂಬ ಅನುಮಾನ ಮೂಡಿದೆ. ದಿನಕ್ಕೆ ಸಾವಿರಾರು ಭಕ್ತರು ಭೇಟಿ ನೀಡುವ ಪ್ರದೇಶದಲ್ಲಿ ಜೂಜು ದಂಧೆ ಎಗ್ಗಿಲ್ಲದೆ ಸಾಗಿದ್ದು ಸಮಾಜವೇ ತಲೆತಗ್ಗಿಸುವಂತಾಗಿದೆ.
ಹೌದು ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿಯ ಬನಶಂಕರಿ ತಾಯಿ ಸನ್ನಿಧಿ ಅತ್ಯಂತ ಮಹತ್ವದ ಧಾರ್ಮಿಕ ಪೀಠ. ಇಂತಹ ಪೀಠದ ಸಮೀಪದಲ್ಲಿರುವ ಶಿವಪುರ ಗುಡ್ಡವೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಆದರೆ ಇತ್ತೀಚಿಗೆ ಶಿವಪುರ ಗುಟ್ಟ ಇಸ್ಪೀಟ್ ಅಡ್ಡೆಯಾಗಿ ಮಾರ್ಪಾಟಾಗಿದ್ದು ಸ್ಥಳಿಯರು ನೋವು ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿವಪುರ ಗುಡ್ಡದಲ್ಲಿ ಪೆಂಡಾಲ್ ಹಾಕಿ ಇಸ್ಪೀಟ್ ಆಡಿಸಲಾಗುತ್ತಿದೆ. ಮಧ್ಯಾಹ್ನ 2 ಗಂಟೆಯಿಂದ ಯಾವುದೇ ಅಳುಕಿಲ್ಲದೇ ಅಕ್ರಮ ದಂಧೆ ನಡೆಯುತ್ತಿದೆ. ಪೊಲೀಸರು ಕೂಡ ಈ ಕಡೆ ಸುಳಿಯುವುದಿಲ್ಲ. ಹೀಗಾಗಿ ಯಾವುದೇ ಭಯವಿಲ್ಲದೆ ಬೆಟ್ಟಿಂಗ್ ಕಟ್ಟಿ ಇಸ್ಪೀಟ್ ಆಡಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ಪಕ್ಕದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಶಿವಪುರ ಗ್ರಾಮದ ಶಿವಪುರ ಗುಡ್ಡದಲ್ಲಿ ಇದೇ ಗ್ರಾಮದ ಪಾಂಡು ಎಂಬ ವ್ಯಕ್ತಿ ಈ ಇಸ್ಪೇಟ್ ದಂಧೆಯನ್ನು ನಡೆಸುತ್ತಿದ್ದಾನೆ.
ಯಾವ ಕ್ಯಾಸಿನೋಗೆ ಕಡಿಮೆ ಇಲ್ಲದಂತೆ ಇಸ್ಪೀಟ್ ದಂಧೆ ನಡೆಯುತ್ತಿದೆ. ಜೂಜುಕೋರರಿಗೆ ಪಾಂಡು ಮೀಟರ್ ಬಡ್ಡಿಯನ್ನೂ ನೀಡ್ತಾನೆ. ಅಷ್ಟೇ ಅಲ್ಲದೆ ಇಲ್ಲಿ ಇಸ್ಪೇಟ್ ಆಡಲು ಬೇರೆ ಬೇರೆ ಜಿಲ್ಲೆಗಳಿಂದ ಜನ ಬರ್ತಾರೆ.
ಇಸ್ಪೀಟ್ ಆಡಲು ಬರುವ ಜನರನ್ನು ಕರೆಯಲು ಆಟೋ ವ್ಯವಸ್ಥೆ ಸಹ ಮಾಡಲಾಗಿದೆ. ನೂರಾರು ಜೂಜುಕೋರರು ಸೇರಿಕೊಂಡು ಭರ್ಜರಿಯಾಗಿ ಇಸ್ಪೇಟ್ ದಂಧೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ರೂ, ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.


