ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರು ಶುಕ್ರವಾರ ಸಂಜೆ ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದ ಒಳಗೆ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿದ್ದ ಬಿಜೆಪಿ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಇಂದು ಮಧ್ಯಾಹ್ನ ದೆಹಲಿಯಿಂದ ಆಗಮಿಸಿದ ಬಳಿಕ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಾಗೇಂದ್ರ, ಮನುವಾದಿಗಳ ಕುತಂತ್ರದಿಂದ ನಾನು ಮೂರು ತಿಂಗಳು ಜೈಲಿಗೆ ಹೋಗಿದ್ದೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಪಕ್ಷ ಬಿಜೆಪಿ ಸದನ ನಡೆಯೋಕೆ ಬಿಡಲಿಲ್ಲ. ಸದನವನ್ನು ಹಾಳು ಮಾಡಿದರು. ಸಂವಿಧಾನ ವಿರೋಧಿ ಈಗಲೂ ಮನುಸ್ಮೃತಿ ಜಾರಿಗೆ ಪ್ರಯತ್ನಿಸುತ್ತಿವೆ. ಇದು ವೇದ ಕಾಲ ಅಲ್ಲ. ಪುರಾಣ ಕಾಲ ಅಲ್ಲ. ಸಂವಿಧಾನ ಕಾಲ, ಅಂಬೇಡ್ಕರ್ ಯುಗ ಇದು. ಉತ್ತರಕಾಂಡದಲ್ಲಿ ಶಂಭುಕ ಹತ್ಯೆಯಾಯ್ತು.
ಇವತ್ತು ಶಂಭುಕ ಹತ್ಯೆ ಆಗಲ್ಲ. ರಕ್ಷಣೆಗೆ ಸಂವಿಧಾನ ಇದೆ. ಮನುಸ್ಮೃತಿಗಳು ಶಂಭುಕ ಹತ್ಯೆ ಮಾಡಿದ ರೀತಿ ಆಗಲ್ಲ. ದಲಿತರು, ಕ್ಷುದ್ರರು, ಆದಿವಾಸಿಗಳು, ಅಲ್ಪಸಂಖ್ಯಾತರು ಬದುಕಬಾರದು ಅನ್ನೋದು ಮನುಸ್ಮೃತಿ ಬಿಜೆಪಿ ಅವರ ಮನಸ್ಥಿತಿ. ಆದರೆ, ಸಂವಿಧಾನ ನಮ್ಮ ರಕ್ಷಣೆ ಮಾಡುತ್ತದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.


