ಅಕ್ಟೋಬರ್. 6, 7 ರಂದು ಆಳ್ವಾಸ್ ಪ್ರಗತಿ – 2023 ಬೃಹತ್ ಉದ್ಯೋಗ ಮೇಳ
ಬೆಳಗಾವಿ : ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 6 ಹಾಗೂ 7 ರಂದು ಆಳ್ವಾಸ್ ಪ್ರಗತಿ – 2023 ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ ಎಂದು ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.
ಭಾನುವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಹಳ್ಳಿ ಭಾಗದಲ್ಲಿನ ಯುವಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಉದ್ಯೋಗ ಮೇಳ ಆಯೋಜನೆ ಮಾಡುತ್ತಾ ಬಂದಿದ್ದು, ಗ್ರಾಮೀಣ ಭಾಗದ ಯುವಕರು ಆಳ್ವಾಸ್ ಪ್ರಗತಿ – 2023 ಬೃಹತ್ ಉದ್ಯೋಗ ಮೇಳದ ಸದವಕಾಶ ಬಳಸಿಕೊಳ್ಳಬೇಕು ಎಂದರು.
ಇದೇ ಅಕ್ಟೋಬರ್ 06 ಮತ್ತು 07 ರಂದು ಮೂಡುಬಿದಿರೆಯ ವಿದ್ಯಾಗಿರಿ ಕಾಲೇಜು ಆವರಣದಲ್ಲಿ ಹದಿಮೂರನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಅತ್ಯುನ್ನತ ಉದ್ಯೋಗ ವಲಯಗಳಾದ ಬಿಎಫ್‌ಎಸ್‌ಐ, ಐಟಿ, ಐಟಿ’ಸ್, ಉತ್ಪಾದನಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ (ಹಾಸ್ಪಿಟಾಲಿಟಿ), ಟೆಲಿ ಕಮ್ಯುನಿಕೇಷನ್, ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಕ್ಷಣ, ಸರ್ಕಾರೇತರ ಸಂಸ್ಥೆ (ಎನ್‌ಜಿಒ) ವಲಯಗಳ ಕಂಪೆನಿ ಹಾಗೂ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದರು.
ಭಾಗವಹಿಸುವ ಸಂಸ್ಥೆಗಳು ನೇಮಕಾತಿ ಮೂಲಕ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವೀಧಗಳಾದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ (ಪ್ಯಾರಾಮೆಡಿಕಲ್), ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ(ಮ್ಯಾನೇಜ್‌ಮೆಂಟ್), ಮೂಲ ವಿಜ್ಞಾನ (ಬೇಸಿಕ್ ಸೈನ್ಸ್), ಶೂಶ್ರುಷೆ (ನರ್ಸಿಂಗ್), ಐಟಿಐ, ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿಅಥವಾ ಎಸ್‌ಎಸ್‌ಎಲ್‌ಸಿ ಮತ್ತು ಇತರ ಅರ್ಹ ಪ್ರತಿಭಾವಂತ ಆಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‌ಸೈಟ್
www.alvaspragati.com ನಲ್ಲಿ ಪ್ರಕಟಿಸಲಾಗುವುದು. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ https://alvaspragati.com/CandidateRegistrationPage#top ನಲ್ಲಿ
ಉಚಿತ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಉದ್ಯೋಗ ಮೇಳಕ್ಕೆ ಆಗಮಿಸುವ ಹೊರ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅಕ್ಟೋಬರ್ 5 ರಿಂದ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ನೋಂದಣಿ ಮಾಡಿರುವ ಸಂಖ್ಯೆ/ಐಡಿಯನ್ನು ತರಬೇಕು. ಅಂಕಪಟ್ಟಿ, ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಅಳತೆಯ 5ರಿಂದ 10 ಭಾವಚಿತ್ರ ತರಬೇಕು. ಬೆಳಿಗ್ಗೆ 8ರಿಂದ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಆಳ್ವಾಸ್ ಪ್ರಗತಿ ಸಂಯೋಜಕ ಡಾ. ಗುರುಶಾಂತ ವಗ್ಗರ್, ಹೊಟೇಲ್ ಉದ್ಯಮಿ ವಿಠ್ಠಲ ಹೆಗಡೆ ಉಪಸ್ಥಿತರಿದ್ದರು.


