ಹುಬ್ಬಳ್ಳಿ : ಚಲಿಸುತ್ತಿದ್ದ ಬಸ್ಸಿನ‌ ಕಿಟಕಿಯಿಂದ ಉಗುಳುವ ವೇಳೆ ಯುವಕನ ರುಂಡ ಬೇರ್ಪಟ್ಟ ಆಘಾತಕಾರಿ ಘಟನೆ ನಡೆದಿದೆ.

ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ಎಂಬಾತನೇ ದುರ್ಘಟನೆಯಲ್ಲಿ ಮೃತಪಟ್ಟವ. ಶಿರೂರ ಗ್ರಾಮದ ನಿವಾಸಿಯಾಗಿದ್ದ ಈತ ಐಟಿಐ ವಿದ್ಯಾರ್ಥಿಯಾಗಿದ್ದ.

ಬುಧವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಲಕ್ಷ್ಮೇಶ್ವರ ಡಿಪೋಗೆ ಸೇರಿದ ಕೆಎ 26 ಎಫ್ 1039 ನಂಬರಿನ ಸಾರಿಗೆ ಬಸ್ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಎಂ – ಸ್ಯಾಂಡ್ ತುಂಬಿಕೊಂಡು ಹೋಗುತ್ತಿದ್ದ ಕೆಎ 04 ಎಡಿ 7218 ನಂಬರಿನ ಲಾರಿಯು ಓವರ್ ಟೆಕ್‌ ಮಾಡುತ್ತಿದ್ದ ಸಂದರ್ಭದಲ್ಲೇ ಫಕ್ಕೀರೇಶ ತಲೆ ಹೊರಗೆ ಹಾಕಿ ಉಗುಳುತ್ತಿದ್ದಾಗ ಟಚ್ ಆಗಿದೆ.

ಡಿಕ್ಕಿಯ ರಭಸಕ್ಕೆ ಬಸ್ನ ಕಿಟಕಿಯಿಂದ ಹೊರಗಿದ್ದ ವಿದ್ಯಾರ್ಥಿ ಫಕ್ಕೀರೇಶನ ತಲೆ (ರುಂಡ) ಕತ್ತರಿಸಿ ರಸ್ತೆಗೆ ಬಿದ್ದಿದ್ದು, ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.