ಬೆಳಗಾವಿ : ಬಿಜೆಪಿ ಹಿರಿಯ ಶಾಸಕ ಅಭಯ್ ಪಾಟೀಲ್ ( MLA Abhay patil ) ಅವರು ಸಂಚರಿಸುತ್ತಿದ್ದ ಕಾರು ಅಪಘಾತವಾಗಿದ್ದು ಸಣ್ಣಪುಟ್ಟ ಗಾಯವಾಗಿದ್ದ ಶಾಸಕರು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಘಟನೆ ನಂತರ ತಡರಾತ್ರಿ ಬೆಳಗಾವಿ ವಾಯ್ಸ್ ಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್. ನಾನು ಕ್ಷೇಮವಾಗಿದ್ದೇನೆ. ನನ್ನ ಆರೋಗ್ಯ ವಿಚಾರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸಂದೇಶ ಕಳುಹಿಸಿದ್ದಾರೆ.
ಹೇಗಾಯ್ತು ಘಟನೆ : ಪಕ್ಷದ ಕಾರ್ಯ ನಿಮಿತ್ತ ಶಾಸಕ ಅಭಯ್ ಪಾಟೀಲ್ ದೆಹಲಿಗೆ ಭೇಟಿ ನೀಡಿದ್ದರು. ದೆಹಲಿಯ ಐ.ಪಿ ಎಸ್ಟೇಟ್ ರಸ್ತೆಯಲ್ಲಿ ಭಾನುವಾರ ರಾತ್ರಿ 9:30 ಕ್ಕೆ ಇನ್ನೋವಾ ಹಾಗೂ ಸ್ವಿಪ್ಟ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆ ವೇಳೆ ಇನ್ನೋವಾ ಕಾರಿನಲ್ಲಿದ್ದ ಕಿರಾರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಅನಿಲ್ ಝಾ ಮತ್ತು ಕರ್ನಾಟಕದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಇದ್ದರು.
ಸ್ವಿಫ್ಟ್ ಕಾರು ಲಕ್ಷ್ಮಿ ನಗರದಿಂದ ಐಟಿಒ ಕಡೆಗೆ ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ 32 ವರ್ಷದ ಅಶುತೋಷ್ ಪಾಂಡೆ ಚಾಲನೆ ಮಾಡುತ್ತಿದ್ದರು.
ಪಿಡಬ್ಲ್ಯೂಡಿ ಕಚೇರಿ ಬಳಿ, ಸ್ವಿಫ್ಟ್ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು, ರೇಲಿಂಗ್ ದಾಟಿದ ನಂತರ, ಐಟಿಒದಿಂದ ಲಕ್ಷ್ಮಿ ನಗರ ಕಡೆಗೆ ಬರುತ್ತಿದ್ದ ಇನ್ನೋವಾಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಲ್ಲರ ಸ್ಥಿತಿ ಸ್ಥಿರವಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಸುಗಮ ಸಂಚಾರಕ್ಕೆ ಸಹಕಾರ ಮಾಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.



