ರಾಯಬಾಗ : ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಡಗುಂದಿ ಗ್ರಾಮದ ಗೌತಮ ಹಣಮಂತ ಭಜಂತ್ರಿ (15) ಎಂಬ ಬಾಲಕ ಭಾನುವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಬಾಲಕ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರು ವಸತಿ ಶಾಲೆಗೆ ಧಾವಿಸಿ, ಕಣ್ಣೀರಿಡುತ್ತಾ ಗೋಳಾಡಿದರು. ಬಾಲಕನ ಸಾವಿನಿಂದ ನಿಡಗುಂದಿ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಬಾಲಕನ ಸಾವಿಗೆ ನಿಖರ ಕಾರಣ ಈವರೆಗೆ ತಿಳಿದುಬಂದಿಲ್ಲ. ಆದರೆ, ಬಾಲಕನ ಸಾವಿನ ಹಿಂದೆ ವಸತಿ ಶಾಲೆಯ ವಾರ್ಡನ್‌ ಅವರ ನಿರ್ಲಕ್ಷ್ಯವಿದೆ ಎಂದು ಪಾಲಕರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ಬಾಲಕನ ಸಾವಿನ ನೈಜ ಕಾರಣವನ್ನು ಪತ್ತೆಹಚ್ಚಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಬಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯುವ ನಿರೀಕ್ಷೆಯಿದೆ.

ಘಟನೆ ಕುರಿತು ಪೊಲೀಸರು ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಶಾಲೆಯ ಸಿಬ್ಬಂದಿ ಹಾಗೂ ಬಾಲಕನ ಸಹಪಾಠಿಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು, ತನಿಖೆಯ ನಂತರವಷ್ಟೇ ಸಾವಿನ ಹಿಂದಿನ ವಾಸ್ತವಾಂಶ ಹೊರಬರಬೇಕಿದೆ.