ಬೆಳಗಾವಿ : ಅಥಣಿ ತಾಲೂಕಿನ ವಿಸ್ತೀರ್ಣ ಹಾಗೂ ಜನಸಂಖ್ಯೆ ಆಧಾರದ ಮೇಲೆ ಸರಕಾರದಿಂದ ಹೊಸ ಯೋಜನೆಗಳ ಅನುಷ್ಠಾನದ ಕುರಿತು ಕಳೆದ ಹಲವು ವರ್ಷಗಳಿಂದ ಜನರಿಂದ ಬೇಡಿಕೆ ಇಡಲಾಗುತ್ತಿದೆ. ಆದರೆ ಈ ಬಾರಿ ಲಕ್ಷ್ಮಣ ಸವದಿ ಸಚಿವಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಜನರ ಬೇಡಿಕೆಗಳು ವೇಗ ಪಡೆದುಕೊಂಡಿವೆ.
ಹೌದು ಈ ಹಿಂದಿನ ಸರಕಾರಗಳು ಅಥಣಿ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿವೆ. ಆದರೆ ಹೆಚ್ಚುತ್ತಿರುವ ಜನಸಂಖ್ಯೆ ಹಿನ್ನೆಲೆಯಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸದಾಗಿ ಒಂದು ಪೊಲೀಸ್ ಠಾಣೆ ತೆರೆಯುವಂತೆ ಆಗ್ರಹ ಹೆಚ್ಚಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಲಕ್ಷ್ಮಣ ಸವದಿ. ಅಥಣಿ ತಾಲೂಕಿನ ಗ್ರಾಮೀಣ ಜನರಿಗೆ ಅನುಕೂಲವಾಗುವ ಹಾಗೂ ಸಧ್ಯದ ಅಥಣಿ ಪಟ್ಟಣದ ಜನಸಂಖ್ಯೆ ಆಧಾರದ ಮೇಲೆ ಹೊಸದಾಗಿ ಗ್ರಾಮೀಣ ಪೊಲೀಸ್ ಠಾಣೆ ತರುವ ಚಿಂತನೆ ಇದ್ದು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದರು.
ಅಥಣಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಕೇವಲ ಒಂದೇ ಠಾಣೆ ಇದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗುತ್ತಿದೆ. ಈ ಕುರಿತು ಶೀಘ್ರದಲ್ಲೇ ಅಧಿಕಾರಿಗಳ ಚರ್ಚಿಸಿ ಗ್ರಾಮೀಣ ಠಾಣೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.



