ಬೆಳಗಾವಿ : ಕ್ಷುಲ್ಲಕ ‌ಕಾರಣಕ್ಕೆ ದುಡಿದು ತಿನ್ನುವ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇಬ್ಬರ ಸಾವಿಗೆ ಕಾರಣವಾದ ದುರುಳನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಮರಾಠಾ ಸಮುದಾಯದಿಂದ ಪ್ರತಿಭಟನೆ ನಡೆಯಿತು.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ‌ ಹೆಬ್ಬಾಳ ಗ್ರಾಮದ ಮೋಹನ್ ಕೆಸರೇಕರ್ ಹಾಗೂ ಅವರ ಪತ್ನಿ ಮನಿಷಾ ಕೆಸರೇಕರ್ ಅವರು ಜೀವನೋಪಾಯಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪವಾಡದಲ್ಲಿ ನೆಲೆಸಿದ್ದರು.

ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವ ದಿನದಂದು ಮನೀಷಾ ಕೇಸರೇಕರ್ ಅವರು ತಮ್ಮ ಮನೆಯ ಅಂಗಳದಲ್ಲಿ ಪಕ್ಕದ ಮನೆಯ ಆರೋಪಿ ಫರೀದ್ ಶೇಖ್ ಹಾಕಿದ್ದ ಕಸ ಮತ್ತು ಉಗುಳಿದ್ದನ್ನು ಪ್ರಶ್ನಿಸಿದ್ದಾರೆ. ಗಲಾಟೆ ಜೋರಾದಾಗ ಪತಿ ಮೋಹನ್ ಅವರು ಕೂಡ ಬಂದಿದ್ದಾರೆ. ಈ ವೇಳೆ ಫರೀದ್ ಶೇಖ್ ಮೋಹನ್ ಅವರ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ನಂತರ ಮನೀಷಾ ಅವರಿಗೆ ಚಾಕುವಿನಿಂದ ಇರಿದಿದ್ದಾನೆ.

ದಾಳಿಯ ವೇಳೆ ಕೇಸರೇಕರ್ ದಂಪತಿಯ ಮಗಳು ಸಹ ಸ್ಥಳದಲ್ಲಿದ್ದರು. ದಾಳಿಯ ಬಳಿಕ ಫರೀದ್ ಶೇಖ್ ಸೈಕಲ್‌ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ದಂಪತಿಯನ್ನು ಮೀರಜ್‌ನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವಾಗ ಮನೀಷಾ ಅವರು ಅದೇ ದಿನ ತಡರಾತ್ರಿ ನಿಧನರಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಮೋಹನ್ ಆಗಸ್ಟ್ 18 ರ ಬೆಳಗ್ಗೆ ಸಾವಿಗೀಡಾಗಿದ್ದರು.

ಜೋಡಿ ಕೊಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಫರೀದ್ ಶೇಖ್ನನ್ನು ಕುಪ್ವಾಡ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಡಬಲ್ ಮರ್ಡರ್ ಪ್ರಕರಣ ದಾಖಲಾಗಿದೆ. ದಾಳಿಯ ನಂತರ, ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್ ಮಿರಾಜ್‌ನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ದಾಳಿಕೋರ ಫರೀದ್ ಶೇಖ್ ವಿರುದ್ಧದ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಅವನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಪ್ರಕರಣದ ಕುರಿತು ಬೆಳಗಾವಿ ಮರಾಠಾ ಸಮುದಾಯ ಪ್ರತಿಭಟನೆ ನಡೆಸಿ ಬೆಳಗಾವಿ ಜಿಲ್ಲೆಯೊಂದಿಗೆ ಕುಟುಂಬಕ್ಕೆ ನಂಟಿರುವುದರಿಂದ ಕರ್ನಾಟಕ ಸರ್ಕಾರವು ಮಹಾರಾಷ್ಟ್ರ ಸರ್ಕಾರ ಹಾಗೂ ಎರಡೂ ರಾಜ್ಯಗಳ ಗೃಹ ಇಲಾಖೆಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಿ, ಕುಟುಂಬಕ್ಕೆ ನ್ಯಾಯ ಹಾಗೂ ಮಕ್ಕಳಿಗೆ ಸುರಕ್ಷಿತ ಭವಿಷ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವೇಳೆ ಮುಖಂಡರಾದ ರಮಾಕಾಂತ ಕೊಂಡುಸ್ಕರ್, ಶರದ ಪಾಟೀಲ್, ರೇಣು ಕಿಲ್ಲೇಕರ್, ಮಾಲೋಜಿ ಅಷ್ಟೇಕರ, ಸರಿತಾ ಪಾಟೀಲ್, ಸಾಗರ ಪಾಟೀಲ್, ಗುಣವಂತ ಪಾಟೀಲ್, ಆರ್.ಎಂ.ಚೌಗುಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.