ಬೆಳಗಾವಿ – ಮಹಾ ಮಳೆ ಅವಾಂತರ ; ದೇವಸ್ಥಾನ, ಸೇತುವೆ ಜಲಾವೃತ
ಬೆಳಗಾವಿ : ಮಹಾರಾಷ್ಟ್ರ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿರುವ ಐತಿಹಾಸಿಕ ಪ್ರಸಿದ್ಧ ನರಸಿಂಹವಾಡಿ ದತ್ತಾತ್ರೇಯ ಮಂದಿರ ಸೇರಿದಂತೆ ಚಿಕ್ಕೋಡಿ ಭಾಗದ ಐದು ಸೇತುವೆಗಳು ಜಲಾವೃತಗೊಂಡಿವೆ.
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಅಉರಿಯುತ್ತಿದ್ದು ಕೃಷ್ಣಾ ನದಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಗಡಿ ಭಾಗದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನಲ್ಲಿರುವ ಐತಿಹಾಸಿಕ ನರಸಿಂಹವಾಡಿ ದತ್ತಾತ್ರೇಯ ಮಂದಿರ ಸುತ್ತ ಪಂಚಗಂಗಾ ಹಾಗೂ ಕೃಷ್ಣಾ ನದಿಯ ನೀರು ಸುತ್ತುವರಿದ ಪರಿಣಾಮ ಭಕ್ತರು ದೇವರ ದರ್ಶನಕ್ಕೆ ಹರಸಾಹಸ ಪಡುವಂತಾಗಿದೆ.
ಮಳೆ ಹಿನ್ನಲೆಯಲ್ಲಿ ಕೃಷ್ಣಾ, ವೇದಗಂಗಾ, ದೂದಗಂಗಾ ನದಿಗಳು ತುಂಬಿ ಹರಿಯುತ್ತಿದ್ದು ದೂದಗಂಗಾ ನದಿಗೆ ಅಡ್ಡಲಾಗಿರುವ ಮೂರು ಸೇತುವೆ ಕೃಷ್ಣಾ ನದಿಯ ಎರಡು ಸೇತುವೆ ಜಲಾವೃತಗೊಂಡಿವೆ. ದೂದಗಂಗಾ ನದಿ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ
ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ, ಕಾರದಗಾ-ಬೋಜ್, ಕುನ್ನೂರ-ಬೋಜವಾಡಿ ಸೇತುವೆಗಳು ಜಲಾವೃತಗೊಂಡಿವೆ, ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯದತ್ತವಾಡ-ಮಲ್ಲಿಕವಾಡ, ಬಾವನಸೌದತ್ತಿ-ಮಾಂಜರಿ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿದೆ.
ಪ್ರತಿದಿನ ಕೃಷ್ಣಾ ನದಿಯಲ್ಲಿ 65 ಸಾವಿರ ಕ್ಯೂಸೆಕ್ ಒಳಹರಿವು ಇರುವುದರಿಂದ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ . ಮುಳುಗಿದ ಸೇತುವೆ ಎರಡು ಬದಿಯಲ್ಲಿ ಬೆಳಗಾವಿ ಜಿಲ್ಲಾಡಳಿತ ಬ್ಯಾರಿಕೆಡ್ ಹಾಕಿ ಸಂಚಾರ ಸ್ಥಗಿತಗೊಳಿಸಿದ್ದು ಜಿಲ್ಲಾಡಳಿತ ನಿಗಾವಹಿಸಿದೆ.


