ಗೌರವ ಬಿಡುವುದಕ್ಕಿಂತ ರಾಜಕೀಯ ನಿವೃತ್ತಿ ಲೇಸು : ಸರ್ಕಾರದ ವಿರುದ್ಧ ಶಾಸಕ ಕಾಗೆ ಆಕ್ರೋಶ
ಬೆಳಗಾವಿ : ಪ್ರಸ್ತುತ ಸರ್ಕಾರದಲ್ಲಿ ಹಿರಿಯ ಶಾಸಕರಿಗೆ ಸಚಿವರು ಗೌರವ ಕೊಡುತ್ತಿಲ್ಲ. ನಮ್ಮ ಗೌರವ ಬಿಟ್ಟು ಬದುಕುವುದಕ್ಕಿಂತ ರಾಜಕೀಯ ನಿವೃತ್ತಿ ಪಡೆಯುವುದೇ ಒಳ್ಳೆಯದು ಎಂದು ಶಾಸಕ ರಾಜು ಕಾಗೆ ಆಕ್ರೋಶ ಹೊರಹಾಕಿದ್ದಾರೆ.
ಪಕ್ಷದ ಸಚಿವರು ಹಿರಿಯ ಶಾಸಕರಿಗೆ ಗೌರವ ಕೊಡುತ್ತಿಲ್ಲ. ನಮ್ಮ ಕೆಲಸಗಳಿಗೆ ಕೇವಲ ಹಾರಿಕೆ ಉತ್ತರ ಕೊಡುತ್ತಿದ್ದು ಮನಸ್ಸಿಗೆ ನೋವಾಗಿದ್ದು, ಈ ವ್ಯವಸ್ಥೆಯಲ್ಲಿ ಇರುವುದಕ್ಕಿಂತ ರಾಜೀನಾಮೆ ಕೊಡುವುದೇ ಒಳ್ಳೆಯದು ಎಂಬ ಭಾವನೆ ಹೊಂದಿದ್ದೇನೆ ಎಂದು ಕಾಗವಾಡ ಕಾಂಗ್ರೆಸ್ ಶಾಸರ ರಾಜು ಕಾಗೆ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಬುಧವಾರ ಕಾಗವಾಡ ಪಟ್ಟಣದ ಸ್ವ ಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಇವರು. ಈಗಿರುವ ಸಚಿವರ ತಂದೆಯವರ ಜೊತೆ ಕೆಲಸ ಮಾಡಿದವರು ನಾವು.ಹಿರಿಯ ಶಾಸಕರಿಗೆ ಗೌರವ ಕೊಡುತ್ತಿಲ್ಲ, ಈ ಘಟನೆಗಳಿಂದ ನಮಗೂ ಸಾಕಷ್ಟು ಮನಸ್ಸಿಗೆ ನೋವಾಗಿದೆ ಆದರೆ ರಾಜಕೀಯ ಅನಿವಾರ್ಯತೆಯಿಂದ ಸುಮ್ಮನಿದ್ದೇವೆ. ಇವೆಲ್ಲವನ್ನೂ ನೋಡಿದರೆ ರಾಜಕೀಯ ನಿವೃತ್ತಿ ಪಡೆಯುವುದೇ ಒಳ್ಳೆಯದು ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕಳೆದ ಎರಡು ದಿನಗಳ ಹಿಂದೆಯಷ್ಟೇ ರೈತರ ಸಂಕಷ್ಟಗಳ ಕುರಿತು ಮಾತನಾಡಿದ್ದ ಇವರು ಹಳ್ಳಿಗಳಲ್ಲಿ ಸರಿಯಾಗಿ ವಿದ್ಯುತ್ ನೀಡಲಾಗುತ್ತಿಲ್ಲ, ಸರ್ಕಾರದಿಂದಲೂ ಸ್ಪಂದನೆ ದೊರೆಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಮತ್ತೊಮ್ಮೆ ಸರ್ಕಾರದ ವಿರುದ್ಧ ಮಾತನಾಡಿರುವ ಶಾಸಕ ರಾಜು ಕಾಗೆ ಸಿದ್ದರಾಮಯ್ಯ ಸಂಪುಟದ ಕೆಲ ಸಚಿವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಕಾಗವಾಡ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ರಾಜು ಕಾಗೆ 2019 ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಸಧ್ಯ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದು ಕಾಗವಾಡ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚುನಾವಣೆಯಲ್ಲಿ ಪ್ರಬಲ ಧ್ವನಿ ಎತ್ತಿದ್ದರು. ಆದರೆ ಕೆಲ ನೀರಾವರಿ ಹಾಗೂ ರಸ್ತೆ ಕಾಮಗಾರಿ ಈವರೆಗೆ ಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರದ ವಿರುದ್ಧ ಕಾಗೆ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.


