Select Page

Advertisement

ಹುಟ್ಟೂರಿನ ಅಭಿವೃದ್ಧಿಗೆ 60 ಕೋಟಿ ರೂ. ಯೋಜನೆ ಕೊಟ್ಟ -ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಹುಟ್ಟೂರಿನ ಅಭಿವೃದ್ಧಿಗೆ 60 ಕೋಟಿ ರೂ. ಯೋಜನೆ ಕೊಟ್ಟ -ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ತಾವು ಹುಟ್ಟಿ, ಬೆಳೆದ ಊರು ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿಯಲ್ಲಿ ಮಂಗಳವಾರ ಅದ್ಧೂರಿ ಸನ್ಮಾನ ಸ್ವೀಕರಿಸಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಲಪ್ರಭಾ ನದಿಗೆ ಅಡ್ಡಲಾಗಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಬ್ರಿಜ್ ಕಂ ಬ್ಯಾರೇಜ್, ತಡೆಗೋಡೆ, ಕಲ್ಯಾಣ ಮಂಟಪ ಮತ್ತಿತರ ಕಾಮಗಾರಿಗಳಿಗೆ ಒಟ್ಟಾರೆ 60 ಕೋಟಿ ರೂ. ಯೋಜನೆ ತಯಾರಿಸಿರುವುದಾಗಿ ಪ್ರಕಟಿಸಿದ್ದಾರೆ.

ಸನ್ಮಾನ ಸ್ವೀಕರಿಸಿದ ಹೆಬ್ಬಾಳಕರ್, ಗ್ರಾಮದಲ್ಲಿ ತಾವು ಬೆಳೆದ ಸನ್ನಿವೇಶ, ಸಂದರ್ಭಗಳನ್ನು ನೆನಪಿಸಿಕೊಂಡು, ರಾಜ್ಯಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಹುಟ್ಟೂರಿಗೆ ಹೆಸರು ತರುವುದಾಗಿ ಭರವಸೆ ನೀಡಿದರು. ಇದೇ ಊರಿನಲ್ಲಿ ಹುಟ್ಟಿ, ಬೆಳೆದು, ಸಾಮಾನ್ಯ ಸರಕಾರಿ ಬಸ್ ನಲ್ಲಿ ಓಡಾಡುತ್ತಿದ್ದ ನನಗೆ ಇಂದು ಇಡೀ ರಾಜ್ಯದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಗೆ ಬಂದು ನಿಮ್ಮೆಲ್ಲರ ಹೃದಯ ಗೆದ್ದು, ಸನ್ಮಾನ ಸ್ವೀಕರಿಸುತ್ತಿರುವುದು ನನಗೆ ಅವಿಸ್ಮರಣೀಯ ಕ್ಷಣ ಎಂದರು.

ನನ್ನ ತವರೂರು ಇದಾದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೂ ನನ್ನನ್ನು ಮನೆ ಮಗಳೆಂದೇ ಕರೆಯುತ್ತಾರೆ. ಲಕ್ಷ್ಮೀ ಅಕ್ಕ ಎಂದು ಕರೆಯುತ್ತಾರೆ. ಹಾಗಾಗಿ ನಾನೀಗ ಇಡೀ ರಾಜ್ಯದ ಮಗಳಾಗಿದ್ದೇನೆ. ಇಡೀ ರಾಜ್ಯದ ಹೊಣೆ ನನ್ನ ಮೇಲಿದೆ. ಹಾಗಂತ ಹುಟ್ಟೂರನ್ನು, ಕ್ಷೇತ್ರವನ್ನು, ಜಿಲ್ಲೆಯನ್ನು ಮರೆಯಲು ಸಾಧ್ಯವಿಲ್ಲ. ನಿಮ್ಮೆಲ್ಲರಿಗೆ ಹೆಮ್ಮೆ ತರುವಂತಹ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.

 ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ರಾಜ್ಯಕ್ಕೇ ಹೆಸರು ಮಾಡಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಅವರು ಅಭಿವೃದ್ಧಿ ಕೆಲಸಗಳನ್ನು ತರುವ ವಿಶ್ವಾಸವಿದೆ. ನಾವೆಲ್ಲ ಅವರ ಬೆನ್ನಿಗೆ ನಿಲ್ಲೋಣ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಮುತ್ನಾಳ ಕೇದಾರ ಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಚಿಕ್ಕಹಟ್ಟಿಹೊಳಿಯ ವೇದಮೂರ್ತಿ ಚಂಬಯ್ಯ ಸ್ವಾಮಿಗಳು, ಜಕನೂರಿನ ವೇದಮೂರ್ತಿ ಶಿವಬಸಯ್ಯ ಸ್ವಾಮಿಗಳು ವಹಿಸಿದ್ದರು. ವಿಶ್ರಾಂತ ಕುಲಪತಿ ವಿ.ಜಿ.ತಳವಾರ, ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ಗಿರಿಜಾ ಹಟ್ಟಿಹೊಳಿ, ಶ್ರೀಧರ ಲಾವಗಿ, ಗ್ರಾಮಸ್ಥರು, ದೇವಸ್ಥಾನ ಕಮೀಟಿ ಪ್ರಮುಖರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!