ಕರ್ನಾಟಕದಲ್ಲಿ ಮುಂದಿನ ಹತ್ತು ತಿಂಗಳಲ್ಲಿ ಮತ್ತೆ ಮತ್ತೆ ಚುನಾವಣೆ
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಮುಗಿದು ಇನ್ನೂ ಒಂದು ವಾರ ಕಳೆದಿಲ್ಲ. ಈಗಾಗಲೇ ಮತ್ತೆ ಯಾವ ಚುನಾವಣೆ ಎಂಬ ಅನುಮಾನ ನಿಮ್ಮಲ್ಲಿ ಮೂಡಿರಬಹುದು. ಆದರೆ ಇದು ಅಷ್ಟೇ ಸತ್ಯ, ಬರುವ ಹತ್ತು ತಿಂಗಳಲ್ಲಿ ರಾಜ್ಯದ ಜನ ಸಾಲು ಸಾಲು ಚುನಾವಣೆ ಎದುರಿಸಬೇಕಿದೆ.
ಮಾರ್ಚ್ 29ರಂದು 2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿತ್ತು. ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದೆ. ಅಷ್ಟಕ್ಕೆ ಒಂದು ಮಹಾ ಚುನಾವಣೆಯನ್ನು ರಾಜ್ಯದ ಜನ ಮಾಡಿ ಮುಗಿಸಿದ್ದಾರೆ.
ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಆದರೆ ಈಗ ಬೆಂಗಳೂರು ನಗರದ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧವಾಗಬೇಕು. ಉಳಿದ ಜಿಲ್ಲೆಗಳ ಜನರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಬೇಕು.
ಸಾಲು, ಸಾಲು ಚುನಾವಣೆ; 2024ರ ಲೋಕಸಭಾ ಚುನಾವಣೆಗೆ 10 ತಿಂಗಳು ಬಾಕಿ ಇದೆ. ಇದಕ್ಕೂ ಮೊದಲು ಕರ್ನಾಟಕದ ಜನರು ಸಾಲು-ಸಾಲು ಚುನಾವಣೆಯನ್ನು ಎದುರಿಸಬೇಕಿದೆ. ಆದ್ದರಿಂದ ಈ ವರ್ಷವಿಡೀ ಜನರು ಮತದಾನ ಮಾಡುತ್ತಲೇ ಇರಬೇಕು.
2021ರ ಏಪ್ರಿಲ್‌ಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅವಧಿ ಮುಕ್ತಾಯಗೊಂಡಿದೆ. ವಿವಿಧ ಕಾರಣಗಳನ್ನು ನೀಡಿದ ಚುನಾವಣೆಯನ್ನು ಮುಂದೂಡಲಾಗಿತ್ತು. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಕೈಗೊಂಡಿದೆ.
ಎರಡು ವರ್ಷಗಳಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬಂದಿಲ್ಲ. ಮೀಸಲಾತಿ ವಿಚಾರ ಸೇರಿದಂತೆ ವಿವಿಧ ಕಾರಣಗಳಿಗೆ ಕೋರ್ಟ್‌ಗೆ ಅರ್ಜಿಗಳು ಸಲ್ಲಿಕೆಯಾಗಿವೆ. ಈಗ ಎಲ್ಲಾ ಅಡೆತಡೆ ತೆರವಾಗಿದ್ದು ಚುನಾವಣೆ ನಡೆಸಲಾಗುತ್ತದೆ. ಈಗಾಗಲೇ ಚುನಾವಣೆ ನಡೆಸುವುದು ವಿಳಂಬವಾದ ಕಾರಣಕ್ಕೆ ಸರ್ಕಾರ ಹೈಕೋರ್ಟ್‌ಗೆ 5 ಲಕ್ಷ ರೂ. ದಂಡವನ್ನು ಕಟ್ಟಿದೆ.


