ಬೆಳಗಾವಿ : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಮಾಜಿ ಸಂಸದ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳಾಂತರಿಸುವ ಆದೇಶಕ್ಕೆ ರಾಜ್ಯ ಬಂದೀಖಾನೆ ಮತ್ತು ಸುಧಾರಣಾ ಸೇವಾ ಇಲಾಖೆ ತಾತ್ಕಾಲಿಕ ತಡೆ ನೀಡಿದೆ. ಆದರೆ ಇತರೆ ಏಳು ಕೈದಿಗಳ ಸ್ಥಳಾಂತರಕ್ಕೆ ಇಲಾಖೆ ಸಮ್ಮತಿ ಸೂಚಿಸಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಪೊಲೀಸರು, ಪ್ರಜ್ವಲ್ ರೇವಣ್ಣ ಸೇರಿದಂತೆ ಏಳು ಆರೋಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಿದ್ದರು. ಈ ಶಿಫಾರಸಿನ ಆಧಾರದ ಮೇಲೆ ಪ್ರಜ್ವಲ್ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸಲು ಕಾರಾಗೃಹ ಇಲಾಖೆ ಆದೇಶಿಸಿತ್ತು.

ಎರಡು ತಿಂಗಳ ಹಿಂದೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದಾಗ ಪ್ರಜ್ವಲ್ ಅವರ ಸೆಲ್‌ನಲ್ಲಿ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಸೇರಿದಂತೆ ಏಳು ಆರೋಪಿಗಳು ಹಾಗೂ ಜೈಲು ವಾರ್ಡನ್ ಪ್ರಕಾಶ್ ಗಾವೇ ಅವರನ್ನು ಪೊಲೀಸರು ಬಂಧಿಸಿದ್ದರು.

ಇದೇ ವೇಳೆ, ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ಜಾಮೀನು ಆದೇಶ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದ ಕೈದಿಗಳಾದ ಶಂಕರ್, ಅರ್ಮುಗಂ ಹಾಗೂ ಕಾರಾಗೃಹದ ಪ್ರಥಮ ದರ್ಜೆ ಸಹಾಯಕ ಶ್ರೀಕಾಂತ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಇಲಾಖೆ ನಿರ್ಧರಿಸಿದೆ. ಈ ಪ್ರಕರಣದಲ್ಲಿ ಕಾರಾಗೃಹದ ಹಿರಿಯ ಅಧಿಕಾರಿ ಸೋಮಶೇಖರ್ ಕೂಡ ಬಂಧನಕ್ಕೊಳಗಾಗಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ವರ್ಗಾವಣೆಯ ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ವಹಿಸಲಾಗಿದ್ದ ಸೋಮಶೇಖರ್ ಬಂಧನಕ್ಕೊಳಗಾದ ಬೆನ್ನಲ್ಲೇ, ಭದ್ರತೆ ಮತ್ತು ನಿಗಾವಣೆಯ ದೃಷ್ಟಿಯಿಂದ ವರ್ಗಾವಣೆ ಆದೇಶವನ್ನು ಡಿಜಿಪಿ ಅಲೋಕ್ ಕುಮಾರ್ ಮರುಪರಿಶೀಲನೆಗೆ ಒಳಪಡಿಸಿದ್ದಾರೆ. ಹೀಗಾಗಿ ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ ಸ್ಥಳಾಂತರವಾಗುವ ಪ್ರಕ್ರಿಯೆಗೆ ಸದ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.