ಬೆಳಗಾವಿ : ಬಸವ ಮಂಟಪ ವಿವಾದಾತ್ಮಕ ಪುಸ್ತಕ ಬರೆದಿರುವ ರವಿ ಹಂಜ್ ಅವರನ್ನು ಕೊಲೆ ಮಾಡಿದರೆ 5 ಲಕ್ಷ ರೂ. ಬಹುಮಾನ ಘೋಷಿಸಿ ನಾಲಿಗೆ ಹರಿಬಿಟ್ಟಿದ್ದ ಅಥಣಿ ಮೂಲದ ಲಿಂಗಾಯತ ಮುಖಂಡ ಬಹಿರಂಗ ಕ್ಷಮೆಯಾಚಿಸಿದ್ದಾರೆ.

ಅಥಣಿ ಪಟ್ಟಣದಲ್ಲಿ ನಡೆದ ಪ್ರತಿಭಟನೆ ವೇಳೆ ಲಿಂಗಾಯತ ಮುಖಂಡ ಪ್ರಕಾಶ ಮಹಾಜನ್ ಎಂಬುವವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ರವಿ ಹಂಜ್ ಅವರನ್ನು ಕೊಲೆ ಮಾಡಿದರೆ ನಾನು ವೈಯಕ್ತಿಕವಾಗಿ 5 ಲಕ್ಷ ರೂ. ಕೊಡುತ್ತೇನೆ ಎಂದಿದ್ದರು.

ಮಹಾಜನ್ ಹೇಳಿಕೆಗೆ ವಿರೋಧ : ಕಳಬೇಡ, ಕೊಲಬೇಡ ಎಂಬ ಬಸವಣ್ಣವರ ಧ್ಯೇಯ ಪಾಲಿಸುವ ಸಮುದಾಯದ ವ್ಯಕ್ತಿ ಬಹಿರಂಗವಾಗಿ ಕೊಲೆ ಮಾಡಲು ಪ್ರಚೋದನೆ ‌ನೀಡಿದ್ದ ಪ್ರಕಾಶ್ ಮಹಾಜನ ಅವರ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.

ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕಾಶ್ ಮಹಾಜನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಬಹಿರಂಗವಾಗಿ ಕ್ರೌರ್ಯಕ್ಕೆ ಉತ್ತೇಜನ ನೀಡುವ ಇವರ ನಡೆಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು.

ನಿದ್ರೆಗೆ ಜಾರಿದ ಪೊಲೀಸ್ ಇಲಾಖೆ

ಒಬ್ಬ ವ್ಯಕ್ತಿ ಬಹಿರಂಗವಾಗಿ ಕೊಲೆಗೆ ಪ್ರಚೋದನೆ ನೀಡಿದರು ಬೆಳಗಾವಿ ಪೊಲೀಸ್ ಇಲಾಖೆ ಮಾತ್ರ ಈವರೆಗೂ ನಿದ್ರೆಯಿಂದ ಎದ್ದಂತೆ ಕಾನುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದವರನ್ನು ಠಾಣೆಗೆ ಎಳೆದು ತರುವ ಪೊಲೀಸರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕುವ ವ್ಯಕ್ತಿ ವೀಡಿಯೋ ಕಣ್ಣಿಗೆ ಕಾಣಲಿಲ್ಲವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ‌.

ವಿವಾದಿತ ಪುಸ್ತಕದ ಕುರಿತು ಈಗಾಗಲೇ ಕರ್ನಾಟಕ ಸರ್ಕಾರ ರವಿ ಹಂಜ್ ವಿರುದ್ಧ ಕ್ರಮ ಜರುಗಿಸಿದೆ. ಜೊತೆಗೆ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಇಷ್ಟೆಲ್ಲಾ ಇದ್ದರು ಒಬ್ಬ ವ್ಯಕ್ತಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕುವುದು ಕಾನೂನಿಗೆ ವಿರುದ್ಧವಾದ ನಡೆ. ಪೊಲೀಸರಿಗೆ ಇದು ಕಾಣಿಸಲಿಲ್ಲವಾ ಎಂಬ ಪ್ರಶ್ನೆ ಮೂಡುವುದು ಸಹಜ.