ಬೆಳಗಾವಿ : ಮಳೆ ಅಭಾವ ಹಾಗೂ ಕುಡಿಯುವ ನೀರಿನ‌ ಸಂರಕ್ಷಣೆ ದೃಷ್ಟಿಯಿಂದ ಕೃಷ್ಣಾ ನದಿ ಪಾತ್ರದ ಅಥಣಿ, ಕಾಗವಾಡ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕುಗಳ‌ ನದಿ ಪಾತ್ರದ ಗ್ರಾಮಗಳಿಗೆ ವಾರದ ಎರಡು ದಿನ ಪಂಪಸೆಟ್ ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಹಿಪ್ಪರಗಿ ಬ್ಯಾರೇಜ್ ನಲ್ಲಿ ಲಭ್ಯವಿರುವ ನೀರನ್ನು ಮುಂಬರುವ ಬೇಸಿಗೆಗೆ ಜನ ಹಾಗೂ ಜಾನುವಾರುಗಳಿಗೆ ಉಳಿಸಿಕೊಳ್ಳುವ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ‌ ಪಾತ್ರದ ಗ್ರಾಮಗಳ ಪಂಪಸೆಟ್ ಗಳಿಗೆ ಬುಧವಾರ ಹಾಗೂ ಭಾನುವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂ ಗೆ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಸೂಚನೆ ನೀಡಿದ್ದಾರೆ.

ದಿನದಿಂದ ದಿನಕ್ಕೆ ತಾಪಮಾನದಲ್ಲಿ ಹೆಚ್ಚಳವಾಗುತ್ತಿದ್ದು ಗ್ರಾಮೀಣ ಭಾಗದ ನದಿ ನೀರಿನ ಮೂಲಗಳು ಬತ್ತುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ಅಲ್ಪಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕೃಷ್ಣಾ‌ ನದಿಯಲ್ಲಿನ ‌ನೀರಿನ ಮಟ್ಟ ಉಳಿಸಿಕೊಂಡು ಜನ ಹಾಗೂ ಜಾನುವಾರುಗಳಿಗೆ ಮುಂಬರುವ ದಿನಗಳಲ್ಲಿ ‌ಬಳಸುವ ನಿರ್ಧಾರಕ್ಕೆ ಜಿಲ್ಲಾಧಿಕಾರಿಗಳು ಬಂದಿದ್ದಾರೆ.