ಮಂಡ್ಯ : ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ (GRUHALAKSHMI)ಯಲ್ಲಿ ನಡೆಯುತ್ತಿದ್ದ ಗೋಲ್ಮಾಲ್ಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯೋಜನೆಗೆ ನೋಂದಾಯಿತ ಮೊಬೈಲ್ ಸಿಮ್ ಕಾರ್ಡ್ (SIM card) ಇನ್ನು ಮುಂದೆ ಮನೆಯ ಯಜಮಾನಿಯ ಹೆಸರಿನಲ್ಲೇ ಇರುವುದು ಕಡ್ಡಾಯವಾಗಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಹಾಗೂ ಎಂಎಲ್ಸಿ ದಿನೇಶ್ ಗೂಳಿಗೌಡ

ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ಫಲಾನುಭವಿಗಳನ್ನು ಹೊರಗಿಡಲು ಈ ನಿಯಮ ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅನುಷ್ಠಾನ ಸಮಿತಿಯು ನಡೆಸಿದ ಆಂತರಿಕ ತನಿಖೆ ವೇಳೆ ಸುಮಾರು 1.99 ಲಕ್ಷ ಫಲಾನುಭವಿ ಮಹಿಳೆಯರು ಮರಣ ಹೊಂದಿದ್ದರೂ, ಅವರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ₹117 ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೆ, ಮಹಿಳೆಯರಿಗೆ ಸಿಗಬೇಕಾದ ಹಣ ಪತಿಯ ಖಾತೆಗಳಿಗೆ ವರ್ಗಾವಣೆಯಾಗುತ್ತಿದ್ದುದು ಹಾಗೂ ಹೊರರಾಜ್ಯದ ನಿವಾಸಿಗಳು ಕೂಡ ಅಕ್ರಮವಾಗಿ ಲಾಭ ಪಡೆಯುತ್ತಿರುವುದು ಪತ್ತೆಯಾಗಿತ್ತು. ಈ ಗಂಭೀರ ಲೋಪಗಳನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಗಮನ ಸೆಳೆದು, ಫಲಾನುಭವಿಗಳ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ.

ನೈಜ ಫಲಾನುಭವಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ

ಕರ್ನಾಟಕದ ಅರ್ಹ ಮತ್ತು ನೈಜ ಮಹಿಳೆಯರಿಗೆ ಮಾತ್ರ ಸರ್ಕಾರದ ಸೌಲಭ್ಯ ಸಿಗಬೇಕು ಎಂಬ ಸಂಕಲ್ಪದೊಂದಿಗೆ ‘ಯಜಮಾನಿ ಹೆಸರಿನ ಸಿಮ್’ ನಿಯಮವನ್ನು ಜಾರಿಗೆ ತರಲಾಗಿದೆ. ಪರಿಷ್ಕೃತ ನಿಯಮಗಳಿಂದಾಗಿ ಪ್ರಸ್ತುತ ರಾಜ್ಯದ 1 ಕೋಟಿ 24 ಲಕ್ಷ ನೈಜ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಸೌಲಭ್ಯ ಸಿಗುತ್ತಿದೆ. ಈ ಮಹತ್ವದ ಸುಧಾರಣೆಯಿಂದಾಗಿ ಮಧ್ಯವರ್ತಿಗಳ ಹಾವಳಿ ಹಾಗೂ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದೆ.

ಶೀಘ್ರದಲ್ಲೇ 33ನೇ ಕಂತಿನ ಹಣ ಬಿಡುಗಡೆ

ಚುನಾವಣಾ ಭರವಸೆಯನ್ನು ಶ್ರದ್ಧೆಯಿಂದ ಈಡೇರಿಸುತ್ತಿರುವ ಸರ್ಕಾರವು, ಇದುವರೆಗೆ 1 ಕೋಟಿ 25 ಲಕ್ಷ ಅರ್ಹ ಮಹಿಳೆಯರಿಗೆ ತಲಾ ₹64,000 ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಯಶಸ್ವಿಯಾಗಿ ತಲುಪಿಸಿದೆ. ಈಗಾಗಲೇ ಆಗಸ್ಟ್ವರೆಗಿನ ಕಂತುಗಳು ಪಾವತಿಯಾಗಿದ್ದು, 33ನೇ ಕಂತಿನ ಒಟ್ಟು ₹2,480 ಕೋಟಿ ಅನುದಾನಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಈ ಮೊತ್ತವು ಶೀಘ್ರದಲ್ಲೇ ಎಲ್ಲಾ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.