ಚನ್ನಮ್ಮನ ಕಿತ್ತೂರು : ಬೆಳಗಾವಿ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಲ್ಲದೆ ಆತನಿಂದ 43 ಬೈಕ್ ವಶಪಡಿಸಿಕೊಂಡಿರುವುದಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ಧಾರವಾಡ, ಗದಗ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ನಿವಾಸಿ ನಾರಾಯಣ ಮನೋಹರ ಕದಮ್ (32) ಬಂಧಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣದ ಬೆನ್ನುಬಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ನಾರಾಯಣ ಕದಮ್ ವಿಚಾರಣೆ ವೇಳೆ ಕಳೆದ ಎರಡು ವರ್ಷಗಳಿಂದ ಕಿತ್ತೂರು, ಹಿರೇಬಾಗೇವಾಡಿ, ಸಂಕೇಶ್ವರ, ಕಲಘಟಗಿ, ಯಲ್ಲಾಪುರ, ಸವದತ್ತಿ, ಗರಗ, ಕುಂದಗೋಳ, ಹಳಿಯಾಳ, ಕಾಕತಿ, ಅಂಕಲಗಿ, ಲಕ್ಷ್ಮೇಶ್ವರ, ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ, ಹುಬ್ಬಳ್ಳಿ ಉಪ ನಗರ, ಹೀಗೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಣಿ ಮೋಟಾರ್ ಸೈಕಲ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಂಧಿತ ಆರೋಪಿಯಿಂದ 30 ಲಕ್ಷ ರೂಪಾಯಿ ಮೌಲ್ಯದ ಒಟ್ಟು 43 ಮೋಟಾರ್ ಸೈಕಲ್ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬಂಧಿತ ಆರೋಪಿತನನ್ನು 3 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಹಾಗೂ ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಕಳೆದ ಶುಕ್ರವಾರ ಕಿತ್ತೂರು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿ ನಾರಾಯಣ ಮನೋಹರ ಕದಮ್ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಬೈಕ್ ಕಳ್ಳತನ ಕಾರ್ಯಾಚರಣೆ ಯಶಸ್ವಿಯಾಗಿ ಪೂರೈಸಿದ ಬೈಲಹೊಂಗಲ ಉಪವಿಭಾಗದ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ ನೇತೃತ್ವದ ಕಿತ್ತೂರು ಸಿಪಿಐ ಶಿವಾನಂದ ಬಿ ಗುಡಗನಟ್ಟಿ, ಭರತ್ ಎಸ್. ಪಿ.ಎಸ್.ಐ, (ಕಾ&ಸು) ಕಿತ್ತೂರ ಪೊಲೀಸ್ ಠಾಣೆ, ಜಿ.ಜಿ.ಹಂಪಣ್ಣವರ ಪಿ.ಎಸ್.ಐ (ಸಿಬಿ) ಕಿತ್ತೂರ ಠಾಣೆ ಹಾಗೂ ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ ಶರೀಪ್ ದಪೇದಾರ, ಅದೃಶ್ಯಪ್ಪ ಚಿಕ್ಕೇರಿ, ನಾಗರಾಜ ಕಡಗನ್ನವರ, ಸುನೀಲ ಮುರಗೋಡ, ಬಾಹುಬಲಿ ಅಗಸಿಮನಿ, ಹನಮಂತ ಜೀವಾಪೂರ, ಮತ್ತು ತನಿಖಾ ಸಹಾಯಕರಾದ ಎಮ್.ಬಿ.ಕಂಬಾರ, ಎಮ್.ಎಸ್.ಹಳ್ಳಿ, ಎಮ್.ಆರ್.ಲಮಾಣಿ ಮತ್ತು ಬೆಳಗಾವಿ ಟೆಕ್ನಿಕಲ್ ಸೆಲ್ನ ಸಚಿನ್ ಪಾಟೀಲ್ ತಂಡದ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


