Select Page

Advertisement

ಬೆಳಗಾವಿ – ವೀರ ಯೋಧನ ದುರಂತ ‌ಅಂತ್ಯ ; ಸಚಿನ್ ನಿಧನಕ್ಕೆ ಕಂಬನಿ ‌ಮಿಡಿದ ನೇಗಿನಹಾಳ ಜನ

ಬೆಳಗಾವಿ – ವೀರ ಯೋಧನ ದುರಂತ ‌ಅಂತ್ಯ ; ಸಚಿನ್ ನಿಧನಕ್ಕೆ ಕಂಬನಿ ‌ಮಿಡಿದ ನೇಗಿನಹಾಳ ಜನ

ಬೈಲಹೊಂಗಲ: ದೇಶದ ಗಡಿಗಳನ್ನು ಕಾಯುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದ ಯುವ ಸಿ.ಆರ್.ಪಿ.ಎಫ್ ಯೋಧ ಸಚಿನ್ ಕರಡಿ (31) ಅವರ ಅಕಾಲಿಕ ನಿಧನವು ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

 
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ರೈಲಿನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟಿದ್ದ ಸಚಿನ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ಸ್ವಗ್ರಾಮ ನೇಗಿನಹಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸು ತ್ತಿದ್ದಂತೆಯೇ ನೂರಾರು ಜನರು ಕಣ್ಣೀರಿನ ನಮನ ಸಲ್ಲಿಸಿದರು. ಗ್ರಾಮದ ಪ್ರಮುಖ ಬೀದಿಗಳ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮನೆಗಳ ಮುಂದೆ ನಿಂತು ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ಪುಷ್ಪಾರ್ಚನೆ ಮಾಡಿ ಅಂತಿಮ ಗೌರವ ಸಲ್ಲಿಸಿದರು. “ಭಾರತ ಮಾತಾ ಕೀ ಜೈ” ಹಾಗೂ “ಸಚಿನ್ ಕರಡಿ ಅಮರ ರಹೇ” ಎಂಬ ಘೋಷಣೆಗಳು ಗ್ರಾಮದಾದ್ಯಂತ ಮೊಳಗಿದವು.

ಕೇವಲ 31 ವರ್ಷದ ಸಚಿನ್ ಕರಡಿ ಅವರು 2017 ರಲ್ಲಿ ಸೇನೆಗೆ ಸೇರಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕೊಯಿಮತ್ತೂರನಲ್ಲಿ ಸೇವೆ ನಿರ್ವಹಿಸುತ್ತಿದ್ದರು.

ಕೆಲವೇ ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬದುಕಿನ ಹೊಸ ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದ ಯುವ ದಂಪತಿಯ ಬದುಕಿನಲ್ಲಿ ವಿಧಿಯಾಟ ಕರಾಳ ತಿರುವು ಪಡೆದುಕೊಂಡಿದೆ. ಪತಿಯ ಪಾರ್ಥಿವ ಶರೀರವನ್ನು ಕಂಡ ಪತ್ನಿಯ ರೋದನ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

“ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ನಮ್ಮ ಗ್ರಾಮದ ಹೆಮ್ಮೆಯ ಮಗ ಇಷ್ಟು ಬೇಗ ನಮ್ಮನ್ನು ಅಗಲುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ” ಎಂದು ಹಲವರು ಕಣ್ಣೀರಿನಲ್ಲೇ ತಮ್ಮ ನೋವನ್ನು ವ್ಯಕ್ತಪಡಿಸಿದರು. ಗ್ರಾಮದ ಪ್ರತಿಯೊಬ್ಬರ ಕಣ್ಣು ತೇವಗೊಂಡಿದ್ದು, ಶೋಕದ ವಾತಾವರಣ ಆವರಿಸಿತ್ತು.

ಅಂತಿಮ ವಿಧಿವಿಧಾನಗಳ ವೇಳೆ  ಖಾನಾಪುರ ಕೋಬ್ರಾ ಸಿ ಎಸ್ ಜೆ ಡಬ್ಲೂ ಟಿಯ ಸಿ ಆರ್ ಪಿ ಎಫ್ ಟ್ರೇನಿಂಗ್ ಸ್ಕೂಲ್  ಯೋಧರು ಗೌರವ ಸೂಚಕವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ರಾಷ್ಟ್ರಧ್ವಜವನ್ನೂ  ಅವರ ಪತ್ನಿಗೆ ಹಸ್ತಾಂತರಿಸಲಾಯಿತು. ಆ ಕ್ಷಣ ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸುವಂತಿತ್ತು. ದೇಶ ಸೇವೆಗೆ ತಮ್ಮ ಜೀವವನ್ನೇ ಅರ್ಪಿಸಿದ ಯೋಧನ ತ್ಯಾಗಕ್ಕೆ ನೀಡಿದ ಗೌರವಕ್ಕೆ ಎಲ್ಲರೂ ಮೌನವಾಗಿ ಸಾಕ್ಷಿಯಾದರು.

ಅಂತಿಮ ದರ್ಶನ ಪಡೆಯಲು ನೂರಾರು  ಸಂಖ್ಯೆಯಲ್ಲಿ ಯುವಕರು, ಹಿರಿಯರು, ಮಹಿಳೆಯರು, ಮಾಜಿ ಸೈನಿಕರು, ಪೊಲೀಸ್ ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಶಿಕ್ಷಕರು ಆಗಮಿಸಿದ್ದರು. ಯೋಧನಿಗೆ ಗೌರವ ಸಲ್ಲಿಸುವ ಮೂಲಕ ದೇಶಭಕ್ತಿಯ ಅಪರೂಪದ ದೃಶ್ಯ ಗ್ರಾಮದಲ್ಲಿ ಕಂಡುಬಂತು.

ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ತಹಸೀಲ್ದಾರ ಸದಾಶಿವ ಮಕ್ಕೋಜಿ, ಗ್ರೇಡ್-2 ತಹಸೀಲ್ದಾರ್ ದೊಡಮನಿ, ಸಿಪಿಐ ಪ್ರಮೋದ ಯಲಿಗಾರ, ಪಿ ಡಿ ಒ ಬಿ ವಿ ಬಳಿಗಾರ, ಗ್ರಾಮಲೆಕ್ಕಾಧಿಕಾರಿ  ಬಸವರಾಜ ಪೂಜೇರ, ವಿವಿಧ ಇಲಾಖೆಗಳ ಅಧಿಕಾರಿಗಳು, ಮಾಜಿ ಯೋಧರು ಹಾಗೂ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು.








Advertisement

Leave a reply

Your email address will not be published. Required fields are marked *

error: Content is protected !!