Select Page

ಹೆಣ್ಣು ಕೊಟ್ಟ ಅತ್ತೆಗೆ ಚಾಕು ಹಾಕಿದ ಅಳಿಯ ; ವೀಡಿಯೋ ಕಾಲ್‌ ಮಾಡಿದ ಕಿತಾಪತಿ…!

ಹೆಣ್ಣು ಕೊಟ್ಟ ಅತ್ತೆಗೆ ಚಾಕು ಹಾಕಿದ ಅಳಿಯ ; ವೀಡಿಯೋ ಕಾಲ್‌ ಮಾಡಿದ ಕಿತಾಪತಿ…!




ಬೆಳಗಾವಿ : ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಕುಟುಂಬ ಕಲಹದ ಹಿನ್ನೆಲೆ ಅತ್ತೆಗೆ ಅಳಿಯ ಚಾಕು ಇರಿದ ಘಟನೆ ಸಂಭವಿಸಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಗಾಯಗೊಂಡವರು ಮಹಾದೇವಿ ಕರಿಗಾರ (45) ಎಂದು ಗುರುತಿಸಲ್ಪಟ್ಟಿದ್ದು, ಅರವಿಂದ ಗವಳಿ (26) ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಮಹಾದೇವಿಯ ಮಗಳನ್ನು ಅರವಿಂದ ಗವಳಿಗೆ ಮದುವೆ ಮಾಡಲಾಗಿತ್ತು. ಎರಡು ತಿಂಗಳ ಹಿಂದೆ ಮಗಳಿಗೆ ಹೆರಿಗೆಯಾಗಿದ್ದು, ಅವಳು ತವರು ಮನೆಯಲ್ಲಿ ವಾಸವಾಗಿದ್ದಳು. ಈ ಮಧ್ಯೆ ಅರವಿಂದ ತನ್ನ ಪತ್ನಿಗೆ ಪದೇಪದೇ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಒತ್ತಾಯ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಮನೆಯ ಕೆಲಸಗಳಲ್ಲಿ ನಿರತರಾಗಿದ್ದ ಕಾರಣ ನಿರಂತರವಾಗಿ ಮೊಬೈಲ್ ಬಳಸಲು ಸಾಧ್ಯವಿಲ್ಲ ಎಂದು ಮಹಾದೇವಿ ಅಳಿಯನಿಗೆ ತಿಳಿಸಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಅರವಿಂದ ಅವಾಚ್ಯವಾಗಿ ನಿಂದನೆ ನಡೆಸಿದ್ದಾನೆ ಎನ್ನಲಾಗಿದೆ.

ಅಲ್ಲದೆ, ತನ್ನ ಮನೆಗೆ ಬಂದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮಹಾದೇವಿ ಎಚ್ಚರಿಕೆ ನೀಡಿದ್ದಳು ಎಂದು ಹೇಳಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ಅರವಿಂದ, ಆಲದಕಟ್ಟಿ ಗ್ರಾಮದಲ್ಲಿರುವ ಮಹಾದೇವಿಯ ಮನೆಗೆ ಬಂದು, ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಘಟನೆಯ ನಂತರ ಗಾಯಗೊಂಡ ಮಹಾದೇವಿಯನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರ ಸ್ಥಿತಿಯನ್ನು ಗಂಭೀರವಾಗಿ ಗಮನಿಸುತ್ತಿದ್ದಾರೆ.
ಘಟನೆಯ ಕುರಿತು ಮಾಹಿತಿ ಪಡೆದ ಮುರಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!