ಅಥಣಿ : ವಿದ್ಯಾರ್ಥಿನಿ ಜೊತೆ ಶಿಕ್ಷಕ ಪರಾರಿ ; ಕಾಲೇಜಿನ ಮುಂದೆ ಹೆತ್ತವರ ಕಣ್ಣೀರು, ಕಂಗಾಲಾದ ಆಡಳಿತ ಮಂಡಳಿ
ಬೆಳಗಾವಿ : ಶಿಕ್ಷಕ ಮಾಡಿದ ತಪ್ಪಿಗೆ ಇಡೀ ಶಿಕ್ಷಣ ಸಂಸ್ಥೆಯೇ ತಲೆ ಕೆಳಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯೆ ಕಲಿಸಬೇಕಿದ್ದ ಶಿಕ್ಷಕನೇ ವಿದ್ಯಾರ್ಥಿನಿಗೆ ಪ್ರೀತಿಯ ಪಾಠ ಮಾಡಿ ಪರಾರಿಯಾದ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ಪಟ್ಟಣದಲ್ಲಿರುವ ಸಾಯಿ ಜ್ಯೋತಿ ಪ್ಯಾರಾಮೇಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಕಾಗವಾಡ ತಾಲೂಕಿನ ಉಗಾರ ಗ್ರಾಮದ ಪವನಕುಮಾರ ಶೀಲಗಾರ ಎಂಬಾತ ತನ್ನದೇ ಕಾಲೇಜಿನ ವಿದ್ಯಾರ್ಥಿನಿಗೆ ಪ್ರೇಮದ ಪಾಠ ಮಾಡಿ ಓಡಿಸಿಕೊಂಡು ಹೋಗಿದ್ದಾನೆ.
ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿದ ಯುವತಿ ಜ. 8 ರಂದು ಮಧ್ಯಾಹ್ನ ನಾಪತ್ತೆಯಾಗಿದ್ದಾಳೆ. ವಿಷಯ ತಿಳಿದು ಹುಡುಕಾಟ ನಡೆಸಿದಾಗಲೇ ಪೋಷಕರಿಗೆ ಉಪನ್ಯಾಸಕನ ಜೊತೆ ತಮ್ಮ ಮಗಳು ಓಡಿ ಹೋಗಿದ್ದು ತಿಳಿದುಬಂದಿದೆ.
ಮಗಳನ್ನು ಹುಡುಕಿ ಕೊಡುವಂತೆ ಪೋಷಕರು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಮಾಜಿ ಸೈನಿಕರ ಸಂಘ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದೆ.


