ಒಕ್ಕುಂದ ಉತ್ಸವಕ್ಕೆ 5 ಲಕ್ಷ ರೂ. ಅನುದಾನ ನೀಡುವಂತೆ ಮನವಿ
ಬೆಳಗಾವಿ : ಬೈಲಹೊಂಗಲ ತಾಲ್ಲೂಕಿನ ಒಕ್ಕುಂದ ಗ್ರಾಮದಲ್ಲಿ ಇದೇ ಫೆ.1ರಂದು ನಡೆಯಲಿರುವ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವಕ್ಕೆ 5 ಲಕ್ಷ ರೂ. ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಬುಧವಾರ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕ್ರಿ.ಶ. 850ರಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗರ ಕಾಲದಲ್ಲಿ ರಚನೆ ಆಗಿರುವ ಕನ್ನಡದ ಮೊಟ್ಟ ಮೊದಲ ಆಧ್ಯ ಗ್ರಂಥ ಕವಿರಾಜ ಮಾರ್ಗದಲ್ಲಿ ಉಲ್ಲೇಖವಾಗಿರುವ ನಾಲ್ಕು ತಿರುಳ್ಗನ್ನಡನಾಡುಗಳ ಪೈಕಿ ಒಕ್ಕುಂದ ಕೂಡ ಒಂದು.
ಗ್ರಾಮದ ಹೊರ ವಲಯದಲ್ಲಿ ಮಲಪ್ರಭಾ ನದಿ ದಂಡೆಯ ಮೇಲಿರುವ ಪ್ರಾಚೀನ ತ್ರಿಕೂಟೇಶ್ವರ ಮಂದಿರ ಶಿಲ್ಪಕಲೆಯನ್ನು ಸಾರುತ್ತಿದೆ. ಕಲೆ, ಸಾಹಿತ್ಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿರುವ ಗ್ರಾಮದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ 2016ರಿಂದ ಒಕ್ಕುಂದ ಉತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಫೆ.1ರಂದು ನಡೆಯಲಿರುವ ಉತ್ಸವಕ್ಕೆ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ “ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ ಸಂಘ”ದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಅದೇರೀತಿ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ತ್ರಿಕೂಟೇಶ್ವರ ಮಂದಿರದ ಜೀರ್ಣೋದ್ಧಾರ ಸ್ಥಗಿತಗೊಂಡಿದೆ. ಜೀರ್ಣೋದ್ಧಾರಕ್ಕೆ ತಂದಿದ್ದ ಮರಳು, ಇಟ್ಟಂಗಿ ಹಾಳಾಗಿದ್ದು, ಯಂತ್ರಗಳು ಇಟ್ಟಲ್ಲಿಯೇ ಇಟ್ಟು ತುಕ್ಕು ಹಿಡಿಯುತ್ತಿವೆ. ತಕ್ಷಣವೇ ಅಭಿವೃದ್ಧಿ ಕೆಲಸ ಶುರು ಮಾಡಬೇಕು.
ಅಲ್ಲದೇ ಶಿಲ್ಪ ಮಂದಿರ ನಡುಗಡ್ಡೆಯಾಗಿದ್ದು, ಗ್ರಾಮದ ದರ್ಗಾದಿಂದ ಮಂದಿರವರೆಗೆ ತೂಗು ಸೇತುವೆ ನಿರ್ಮಿಸಬೇಕು. ಇಷ್ಟು ಮಾಡಿದರೆ ಇದೊಂದು ಪ್ರಸಿದ್ಧ ಪ್ರವಾಸಿ ತಾಣ ಆಗಲಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಮನವಿ ಸಲ್ಲಿಸಿದ ಬಳಿಕ ಉತ್ಸವ ಸಮಿತಿ ಗೌರವಾಧ್ಯಕ್ಷ ಸಿ.ಕೆ.ಮೆಕ್ಕೇದ ಮಾತನಾಡಿ, ಇತಿಹಾಸ ಪ್ರಸಿದ್ಧ ನಮ್ಮೂರಿನ ಉತ್ಸವವನ್ನು ಸರ್ಕಾರದಿಂದಲೇ ಆಚರಿಸಬೇಕು ಎನ್ನುವುದು ನಮ್ಮ ಬೇಡಿಕೆ ಆಗಿದೆ. ಆ ಪ್ರಕಾರ ಕಳೆದ ಎರಡು ವರ್ಷಗಳಿಂದ ಜಿಲ್ಲಾಡಳಿತ 2 ಲಕ್ಷ ಅನುದಾನ ನೀಡಿದೆ. ಈ ವರ್ಷ ಇನ್ನು ವಿಜೃಂಭಣೆಯಿಂದ ಆಚರಿಸಲು 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕು.
ಜೊತೆಗೆ ಶಿಲ್ಪ ಮಂದಿರ ಜೀರ್ಣೋದ್ಧಾರ ಕೂಡ ಶೀಘ್ರವೇ ಪುನಃ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೋರಿದ್ದೇವೆ. ನಮ್ಮ ಮನವಿಗೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಈ ವೇಳೆ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಸಿ.ಬಿ.ಗಣಾಚಾರಿ, ಸಲಹಾ ಸಮಿತಿ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ, ಸಂಘದ ಕಾರ್ಯದರ್ಶಿ ಅಶೋಕ ಭದ್ರಶೆಟ್ಟಿ, ಖಜಾಂಚಿ ಪರ್ವತಗೌಡ ಪಾಟೀಲ, ನಿರ್ದೇಶಕರಾದ ಜಿ.ಎಂ.ಸುತಗಟ್ಟಿ, ಮಡಿವಾಳಪ್ಪ ತಡಸಲ್, ಸಿದ್ದನಗೌಡ ಪಾಟೀಲ, ಗ್ರಾಮಸ್ಥರಾದ ಮಲ್ಲಿಕಾರ್ಜುನ ಕಲ್ಲಿ, ಮಂಜುನಾಥ ಹೂವಿನ, ನಾಗಪ್ಪ ಸೊಂಟಕ್ಕಿ ಇದ್ದರು.


