RSS ಪಥಸಂಚಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗೆ ಶಿಕ್ಷೆ ವಿಧಿಸಿದ ಬೆಳಗಾವಿ ಖಾಸಗಿ ಶಾಲಾ ಶಿಕ್ಷಕಿ ; ವ್ಯಾಪಕ ಖಂಡನೆ..!
ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದ ಖಾಸಗಿ ಶಾಲಾ ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಕಳೆದ ಭಾನುವಾರ ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದ್ದ ಆರ್ ಎಸ್ ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ. ಮರುದಿನ ಶಾಲೆಗೆ ಹೋದ ವೇಳೆ ಶಿಕ್ಷಕಿ ವಿದ್ಯಾರ್ಥಿಯ ಗಣವೇಶದ ಫೋಟೋಗಳನ್ನು ಸಾರ್ವಜನಿಕವಾಗಿ ತೋರಿಸಿ ಅವಮಾನ ಮಾಡಿದ್ದಲ್ಲದೆ, ತರಗತಿಯಿಂದ ಆಚೆ ಹಾಕಿ ಶಿಕ್ಷೆ ನೀಡಿದ್ದಾಳೆ.
ಡಾ. ಸೋನಾಲಿ ಸರ್ನೋಬತ್ ಖಂಡನೆ : ಪಥಸಂಚಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗೆ ಅವಮಾನಿಸಿದ ಘಟನೆಯನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ತೀವ್ರವಾಗಿ ಖಂಡಿಸಿದ್ದಾರೆ. ಅವಮಾನಿಸಿ ಶಿಕ್ಷಕಿ ಕಾವೇರಿ ಎಂಬುವವರು ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.
ಭಾನುವಾರ ಸಾರ್ವಜನಿಕ ರಜೆ ದಿನವಾಗಿರುವುದರಿಂದ ವಿದ್ಯಾರ್ಥಿ ಪಥಸಂಚಲನದಲ್ಲಿ ಭಾಗವಹಿಸುವುದು ಸಂಪೂರ್ಣ ವೈಯಕ್ತಿಕ ವಿಷಯ. ಆದರೆ ಶಿಕ್ಷಕಿ ಅದನ್ನು ರಾಜಕೀಯವಾಗಿ ತೆಗೆದುಕೊಂಡು ತರಗತಿಯಲ್ಲಿ ವಿದ್ಯಾರ್ಥಿಯ ಅವಮಾನ ಮಾಡಿದ್ದಾರೆ. ಶಾಲೆ ಆಡಳಿತ ಮಂಡಳಿ ಘಟನೆ ಕುರಿತು ಸ್ಪಷ್ಟನೆ ನೀಡಬೇಕು ಹಾಗೂ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.


