
ದೂರವಾಗಿದ್ದ ಜೋಡಿ ಹಕ್ಕಿಗಳನ್ನು ಒಗ್ಗೂಡಿಸಿದ ಲೋಕ್ ಅದಾಲತ್

ಬೈಲಹೊಂಗಲ : ಜನರಲ್ಲಿ ದ್ವೇಷಭಾವನೆ ತೊರೆದು ಸಹಬಾಳ್ವೆಯಿಂದ ಬದುಕಲು ಲೋಕ್ ಅದಾಲತ್ ಸಹಕಾರಿಯಾಗಿದೆ. ಇಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಜನರಿಗೆ ಮಾನಸಿಕ ನೆಮ್ಮದಿ ದೊರೆತು, ಬಾಂಧವ್ಯ ಬೆಸೆಯುವ ಕೆಲಸವಾಗುತ್ತದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ ಹೇಳಿದರು.
ಶನಿವಾರ ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ ನಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಮಾತನಾಡಿ, ಕೆಲವೊಂದು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಕಾನೂನಡಿ ಅವಕಾಶ ಕಲ್ಪಿಸಿದೆ.ಇದನ್ನು ಕಕ್ಷಿದಾರರು ಸದುಪಯೋಗ ಪಡಿಸಿಕೊಳ್ಳಬೇಕು. ಜನರನ್ನು ನ್ಯಾಯಾಲಯದ ದೀರ್ಘ ಪ್ರಕ್ರಿಯೆಗಳನ್ನು ತಪ್ಪಿಸಿ, ಲೋಕ ಅದಾಲತ್ ಮೂಲಕ ತ್ವರಿತ ಹಾಗೂ ಕಡಿಮೆ ಖರ್ಚಿನ ನ್ಯಾಯ ಪಡೆಯಲು ಪ್ರೋತ್ಸಾಹಿಸಿದರು.
ಹಿರಿಯ ದಿವಾಣಿ ನ್ಯಾಯಾಧೀಶ ರವಿ ಚವ್ಹಾಣ, ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸ್ಸಾಪುರ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಅವರ ಸಮ್ಮುಖದಲ್ಲಿ ಸುಮಾರು 590 ಪ್ರಕರಣಗಳು ರಾಜಿಗೊಂಡು ಸುಮಾರು ರೂ. 1 ಕೋಟಿ 95 ಲಕ್ಷ ಮೊತ್ತ ಲೋಕ ಅದಾಲತನಲ್ಲಿ ನಿರ್ಧರಿಸಲಾಯಿತು.
ಸುಮಾರು ಒಂದುವರೆ ವರ್ಷಗಳಿಂದ ಬೇರೆಯಾಗಿ ವಿಚ್ಚೆದನಕ್ಕೆ ಅರ್ಜಿ ಹಾಕಿದ್ದ ಒಂದು ಜೋಡಿ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ಮರು ದಾಂಪತ್ಯಕ್ಕೆ ಕಾಲಿಟ್ಟರು. ವಾದಿ ಪರ ನ್ಯಾಯವಾದಿ ಎಸ್ ಪಿ ಬೋಳಶೆಟ್ಟಿ, ಪ್ರತಿವಾದಿ ಪರ ಎಸ್ ಎಸ್ ನದಾಫ ವಕಾಲತ್ತು ವಹಿಸಿದ್ದರು.
ಸಂಧಾನಕಾರರಾಗಿ ವ್ಹಿ.ಜಿ ಕಟದಾಳ, ಪ್ರೇಮಾ ಬಡಿಗೇರ, ಎಂ.ಎಸ್. ಬಂಕಾಪುರ ಕಾರ್ಯನಿರ್ವಹಿಸಿದರು.
ಶಿರಸ್ತೆದಾರ ಡಿ ಜಿ ಮಠಪತಿ, ಪಿ.ಹಾಲೇಶ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್.ಮೆಳವAಕಿ, ವ್ಹಿ.ಸಿ.ಪೂಜೇರ, ಎಫ್ ಎಂ. ಸುಣಗಾರ, ಸಿ.ಎಸ್.ಅಷ್ಟಗಿಮಠ, ಆರ್. ಆರ್. ಖೋತ, ವಿ.ವಿ. ಹಣಬರಟ್ಟಿ, ಎ.ವಿ.ಯಲಿಗಾರ, ಆಯ್. ಎಸ್. ಪಾಟೀಲ ಹಾಗೂ ವಕೀಲರು, ನ್ಯಾಯಾಲಯದ ಸಿಬ್ಬಂದಿಗಳು ಇದ್ದರು.