ಧರ್ಮ ಉಳಿಸಲು ಸಂತರ ಕೊಡುಗೆ ಅಪಾರ ; ಯತ್ನಾಳ್
ಕಾಗವಾಡ : ಭಾರತದ ಪವಿತ್ರ ಪುಣ್ಯ ಭೂಮಿಯಲ್ಲಿ ಸನಾತನ ಹಿಂದೂ ಧರ್ಮವನ್ನು ಪ್ರತಿಯೊಂದು ಗ್ರಾಮಗಳಲ್ಲಿ ಇಲ್ಲಿನ ಸಂತ ಮಹಾಂತ ಶ್ರೇಷ್ಠರು ಹಿಂದೂ ಧರ್ಮವನ್ನು ಉಳಿಸಲು ತಮ್ಮ ನಿರಂತರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ, ನಮ್ಮ ಹಿಂದೂ ಧರ್ಮದವರು ಅನ್ಯಾಯಕ್ಕೆ ಒಳಗಾಗಿದ್ದಾರೆ ಹೊರತು ಯಾರ ಮೇಲೂ ಅನ್ಯಾಯ ಎಸಗಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ತಾಲೂಕಿನ ಕೃಷ್ಣಾಕಿತ್ತೂರ ಗ್ರಾಮದ ಗುರುದೇವ ಆಶ್ರಮದಲ್ಲಿ ಅಮೃತ ಮಹೋತ್ಸವ ಹಾಗೂ ರಜತ ಮಹೋತ್ಸವದ ಭಕ್ತಿ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು. ವಿಶ್ವ ಪ್ರಸಿದ್ಧ ಮಹಾ ಕುಂಭಮೇಳದಲ್ಲಿ ಭಾರತ ಅಷ್ಟೇ ಅಲ್ಲದೆ ಜಗತ್ತಿನ ಅನೇಕ ರಾಷ್ಟ್ರದವರು ಪವಿತ್ರ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಧರ್ಮ ಉಳಿದರೆ ನಾವು ಉಳಿಯುತ್ತೇವೆ ನಮ್ಮ ಧರ್ಮದ ಬಗ್ಗೆ ಹೆಮ್ಮೆ ಇರಬೇಕು ಎಂದರು.
ಕಕಮರಿಯ ಗುರುದೇವ ಆಶ್ರಮದ ಆತ್ಮರಾಮ ಸ್ವಾಮಿಜಿ ಆಶೀರ್ವಚನ ನೀಡುತ್ತಾ ಈ ಕೃಷ್ಣಾ ಕಿತ್ತೂರು ಪಾಪದ ಗ್ರಾಮವನ್ನು ಪುಣ್ಯದ ಗ್ರಾಮವನ್ನಾಗಿ ಮಾಡಿದ ಕೀರ್ತಿ ಶ್ರೀ ಮಲ್ಲಿಕಾರ್ಜುನ ಶ್ರೀಗಳಿಗೆ ಹಾಗೂ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಸಲ್ಲುತ್ತದೆ. ಇಬ್ಬರೂ ಶ್ರೀಗಳ ತವರೂರು ಕೃಷ್ಣಾ ಕಿತ್ತೂರು ಎಂದು ಹೆಮ್ಮೆಯಿಂದ ಹೇಳಬಹುದು. ಶ್ರೀಗಳ ನಿರಂತರ ಪಾದ ಸ್ಪರ್ಶ ಹಾಗೂ ಜ್ಞಾನಾಮೃತ ನೀಡಿ ಒಂದು ಆಧ್ಯಾತ್ಮಿಕ ಆದರ್ಶ ಗ್ರಾಮವಾಗಿ ಮಾಡಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಯಕ್ಕಂಚಿಯ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿ, ಬಸವೇಶ್ವರ ಶ್ರೀಗಳು ಶ್ರೀ ಸಿದ್ದೇಶ್ವರ ಶ್ರೀಗಳ ಮಾನಸ ಪುತ್ರರು ಅವರ ನಿರಂತರ ಸೇವೆಯನ್ನು ಮಾಡಿದವರಾಗಿದ್ದಾರೆ ಇವರಲ್ಲಿ ಶ್ರೀ ಮಲ್ಲಿಕಾರ್ಜುನ ಶ್ರೀಗಳನ್ನು ಹಾಗೂ ಶ್ರೀ ಸಿದ್ದೇಶ್ವರ ಶ್ರೀಗಳನ್ನು ಈ ಪೂಜ್ಯರಲ್ಲಿ ಕಾಣಬಹುದು, ಇವರ ಆಧ್ಯಾತ್ಮಿಕ ಕಾರ್ಯ ಶ್ಲಾಘನೀಯವಾದದ್ದು ಕೃಷ್ಣ ಕಿತ್ತೂರು ಹಾಗೂ ಐನಾಪುರ ಗುರುದೇವ ಆಶ್ರಮದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಉತ್ತಮ ಸಂಸ್ಕಾರವನ್ನು ನೀಡುತ್ತಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಾಕಿತ್ತೂರ, ಐನಾಪುರ ಗುರುದೇವ ಆಶ್ರಮದ ಬಸವೇಶ್ವರ ಸ್ವಾಮೀಜಿ ವಹಿಸಿ ಆರ್ಶಿವಚನ ನೀಡಿದರು. ಅತಿಥಿಗಳಾಗಿ ಪ್ರವೀಣ ಗಾಣಿಗೇರ,
ಶಿವಯ್ಯ ಹಿರೇಮಠ, ಪಂಚಾಕ್ಷರಯ್ಯ ಹಿರೇಮಠ ಆಗಮಿಸಿದ್ದರು. ಶ್ರೀ ಮಲ್ಲಿಕಾರ್ಜುನ ಶ್ರೀಗಳು ಕೃಷ್ಣಾಕಿತ್ತೂರ ಗ್ರಾಮಕ್ಕೆ ಪಾದಾರ್ಪಣೆ 75 ವರ್ಷ ಆಗಿದ್ದರಿಂದ ಗ್ರಾಮದ 75 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯ ವೃದ್ಧರಿಗೆ ವಿಶೇಷ ಸನ್ಮಾನ ಮಾಡಿ ರುದ್ರಾಕ್ಷಿಯ ಜಪಮಣಿಯನ್ನು ಕೊಡಲಾಯಿತು. ಶಿಕ್ಷಕ ಶಿವಗೌಡ ಚೌಗುಲಾ ನಿರೂಪಿಸಿ ವಂದಿಸಿದರು.
ಗಮನಸೆಳೆದ ರಾಜೇಶ್ವರಿ ಪೋತದಾರ ತಂಡದ ಗಾಯನ
ಕೃಷ್ಣಾಕಿತ್ತೂರ ಗುರುದೇವ ಆಶ್ರಮದಲ್ಲಿ ಅಮೃತ ಮಹೋತ್ಸವ ಹಾಗೂ ರಜತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಗಾಯಕಿ ರಾಜೇಶ್ವರಿ ಅಶೋಕ್ ಪೋತದಾರ ತಂಡದಿಂದ ಭಕ್ತಿಗೀತೆ ಕಾರ್ಯಕ್ರಮ ಎಲ್ಲರ ಗಮನಸೆಳೆಯಿತು. ಈ ಸಂದರ್ಭದಲ್ಲಿ ಮಲ್ಲಪ್ಪ ಬೋರ್ಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


