Select Page

Advertisement

ಸ್ವಾರ್ಥ ಬದಿಗಿಟ್ಟು ಪಕ್ಷಕ್ಕಾಗಿ ದುಡಿಯುವೆ ; ಒಡೆದ ಮನಸ್ಸು ಒಂದು ಮಾಡಿದ ಘಟನೆ….!

ಸ್ವಾರ್ಥ ಬದಿಗಿಟ್ಟು ಪಕ್ಷಕ್ಕಾಗಿ ದುಡಿಯುವೆ ; ಒಡೆದ ಮನಸ್ಸು ಒಂದು ಮಾಡಿದ ಘಟನೆ….!

ಬೆಂಗಳೂರು : ಕಳೆದ ವಿಧಾನಸಭಾ ಸೋಲಿಗೆ ನಮ್ಮದೇ ಪಕ್ಷದ ಮುಖಂಡರು ಕಾರಣ ಎಂದು ಸಿ.ಟಿ ರವಿ ತಮ್ಮ ಆಕ್ರೋಶ ಹೊರಹಾಕಿದ್ದರು. ನಂತರ ಪರಿಷತ್ ಸದಸ್ಯ ಸ್ಥಾನ ಸಿಕ್ಕರೂ ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ಕೈತಪ್ಪಿದ್ದಕ್ಕೆ ಕೊಂಚ ಅಸಮಾಧಾನವೂ ಅವರಲ್ಲಿತ್ತು. ಹೀಗೆ ನಾನಾ ಕಾರಣಗಳಿಗೆ ಒಡೆದುಹೋಗಿದ್ದ ಬಿಜೆಪಿ ಮನಸ್ಸುಗಳು ಒಂದಾಗಿವೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಹೇಳಿಕೆ ಪ್ರಕರಣದ ನಂತರ ಪೊಲೀಸರು ಸಿ.ಟಿ ರವಿ ಅವರನ್ನು ನಡೆಸಿಕೊಂಡಿದ್ದ ರೀತಿಗೆ ಜನ ಆಕ್ರೋಶ ಹೊರಹಾಕಿದ್ದರು. ಸರಕಾರದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿತ್ತು. ಈ ಮಧ್ಯದಲ್ಲೇ ಮನೆಯೊಂದು ಮೂರು ಬಾಗಿಲು ಆಗಿದ್ದ ಬಿಜೆಪಿಯಲ್ಲಿ ಒಗ್ಗಟ್ಟಿನ ಪ್ರದರ್ಶನ ಕಂಡುಬಂತು. ನಾಯಕನ ನೋವಿಗೆ ಪ್ರತಿಯೊಬ್ಬರೂ ಹೆಗಲು ಕೊಟ್ಟಿದ್ದು ಬಿಜೆಪಿ ಕಾರ್ಯಕರ್ತರಿಗೆ ಆಶ್ಚರ್ಯದ ಜೊತೆ ಸಂತೋಷವನ್ನು ತರಿಸಿತ್ತು.

ಇಡೀ ಪ್ರಕರಣದ ನಂತರ ಶನಿವಾರ ಮಧ್ಯರಾತ್ರಿ ತವರು ಜಿಲ್ಲೆ ಚಿಕ್ಕಮಗಳೂರಿಗೆ ಕಾಲಿಟ್ಟ ತಕ್ಷಣ ಸಿ.ಟಿ ರವಿ ಕಣ್ಣೀರು ಹಾಕಿದರು. ಈ ಘಟನೆಯಿಂದ ಸ್ವಾರ್ಥ ಬದಿಗಿಟ್ಟು ಕಾರ್ಯಕರ್ತರ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ. ನನ್ನ ಕಷ್ಟದ ಸಂದರ್ಭದಲ್ಲಿ ವಿಜಯೇಂದ್ರ, ಯಡಿಯೂರಪ್ಪ, ಅಶೋಕ್, ಯತ್ನಾಳ್, ಬೆಲ್ಲದ್, ಅಭಯ್ ಪಾಟೀಲ್ ಸೇರಿದಂತೆ ಕೇಂದ್ರದ ನಾಯಕರು ಬೆನ್ನಿಗೆ ನಿಂತಿದ್ದನ್ನು ನೆನೆದು ಕಣ್ಣೀರು ಸುರಿಸಿದರು.

ಸಿ.ಟಿ ರವಿ ಸಂಕಷ್ಟದ ಸಂದರ್ಭದಲ್ಲಿ ಒಡೆದ ಮನೆ ಬಿಜೆಪಿ ಒಂದುಗೂಡಿದೆ. ಇದರಿಂದ ಅವರ ಮಧ್ಯೆ ಇದ್ದ ವೈಮನಸ್ಸಿಗೆ ತಾತ್ಕಾಲಿಕ ಚಿಕಿತ್ಸೆ ಸಿಕ್ಕಂತಾಗಿದೆ. ರಾಜಕೀಯದಲ್ಲಿ ಒಂದು ಘಟನೆ ಯಾವ ಮಟ್ಟಿಗೆ ಬದಲಾವಣೆ ತರುತ್ತದೆ ಎಂಬುದಕ್ಕೆ ಸಿ.ಟಿ ರವಿ ಪ್ರಕರಣವೇ ಸಾಕ್ಷಿ. ಪೊಲೀಸ್ ಇಲಾಖೆ ಮಾಡಿಕೊಂಡ ಎಡವಟ್ಟಿನಿಂದ ಇಡೀ ಪ್ರಕರಣದ ದಿಕ್ಕು ಬದಲಾಯಿತು. ಮಾಡದ ತಪ್ಪಿಗೆ ಸರಕಾರ ಮುಜುಗರ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದಂತು ಸತ್ಯ.

ಆದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಬಳಸಿದ ಪದದ ಕುರಿತು ಈಗಲೂ ಸಿ.ಟಿ ರವಿ ಮೇಲೆ ರಾಜ್ಯದ ಪ್ರತಿಯೊಬ್ಬರಿಗೂ ಅಸಮಾಧಾನ ಇದೆ. ಇಬ್ಬ ಜವಾಬ್ದಾರಿಯುತ ಸಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಈ ರೀತಿಯ ಪದ ಬಳಕೆ ಮಾಡಿದ್ದು ನಿಜಕ್ಕೂ ಶೋಚನೀಯ. ತಮ್ಮ ವಿರುದ್ಧ ಕೇಳಿಬಂದ ಹೇಳಿಕೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೋವು ಅನುಭವಿಸುತ್ತಿದ್ದಾರೆ. ನಮ್ಮ ಕುಟುಂಬವೇ ನೋವಿನಲ್ಲಿದೆ ಎಂದು ಮೃನಾಲ್ ಹೆಬ್ಬಾಳಕರ್ ಹೇಳಿದ್ದು ಎಂತವರಿಗೂ ಸಂಕಟವನ್ನುಂಟುಮಾಡುವ ಸಂದರ್ಭ. ವಿಪರ್ಯಾಸವೆಂದರೆ ಯಾವುದೋ ಘಟನೆಯಿಂದ ಗಂಭೀರವಾಗಿದ್ದ ವಿಷಯ ಬದಿಗೆ ಸರಿದಿದ್ದು ನಮ್ಮ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

Advertisement

Leave a reply

Your email address will not be published. Required fields are marked *

error: Content is protected !!