ಸಂಸದೆ ಪ್ರಿಯಾಂಕಾಗೆ ಸನ್ಮಾನ ಮಾಡುವ ವಿಚಾರವಾಗಿ ಜಗಳ ; ಪಂಚಾಯತಿಗೆ ಬೆಂಕಿ ಹಚ್ಚಿ ಪರಾರಿ
ಬೆಳಗಾವಿ : ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಸನ್ಮಾನ ಮಾಡುವ ವಿಚಾರವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ, ಗ್ರಾಮ ಪಂಚಾಯತಿ ಕಚೇರಿಗೆ ಬೆಂಕಿ ಹಚ್ಚುವ ಮಟ್ಟಿಗೆ ಗಲಾಟೆ ಸಂಭವಿಸಿದೆ.
ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮ ಪಂಚಾಯತಿಗೆ ಕಿಡಿಗೇಡಿಗಳು ಶುಕ್ರವಾರ ತಡರಾತ್ರಿ ಬೆಂಕಿ ಇಟ್ಟ ಪರಿಣಾಮ ಅನೇಕ ವಸ್ತುಗಳು ಸುಟ್ಟು ಕರಕಲಾಗಿವೆ. ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಗೆ ಬರುವ ಕಲಕಾಂಬ ಗ್ರಾಮದಲ್ಲಿ ತಮ್ಮ ಪುತ್ರಿಗೆ ಸನ್ಮಾನ ಮಾಡುವ ವಿಚಾರವಾಗಿ ಘಟನೆ ಸಂಭವಿಸಿದೆ.
ಶುಕ್ರವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಕಲಕಾಂಬ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಒಂದು ಗುಂಪು ಸಂಸದರನ್ನು ಸನ್ಮಾನಿಸಿದ್ದಾರೆ.
ಇನ್ನೊಂದು ಗುಂಪಿನ ಸದಸ್ಯರು ತಮ್ಮ ಕಾಲೋನಿಗೆ ಕರೆದೊಯ್ದು ಸನ್ಮಾನಿಸುವ ಉದ್ದೇಶ ಹೊಂದಿದ್ದರು. ಇದಕ್ಕೆ ಅವಕಾಶ ಸಿಗದಿದ್ದಾಗ ಎರಡು ಗುಂಪುಗಳ ನಡುವೆ ವಾಗ್ವಾದ ಏರ್ಪಟ್ಟಿದೆ.
ಉದ್ರಿಕ್ತರ ಗುಂಪು ಶುಕ್ರವಾರ ತಡರಾತ್ರಿ ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ಹಾಕಿ ಗ್ರಾಮ ಪಂಚಾಯತಿ ಕಚೇರಿಯತ್ತ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಕಿಟಕಿ ಗಾಜು ಜಖಂ ಆಗಿದ್ದು, ಕೆಲ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.


