ಯರಗಟ್ಟಿ : ಪಿಡಿಒ ಮೇಲೆ ಹಲ್ಲೆ ; ನಾಲ್ವರ ವಿರುದ್ಧ ಎಫ್ಐಆರ್ ದಾಖಲು
ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಪಿಡಿಒ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಕಲಿ ದಾಖಲೆ ಆಧಾರದ ಮೇಲೆ ಆಸ್ತಿಯ ಉತಾರ್ ನೀಡದ ಹಿನ್ನಲೆಯಲ್ಲಿ ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಗೌಡ ಪಾಟೀಲ್ ಎಂಬುವವರ ಮೇಲೆ ಸೋಮವಾರ ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಮಗೇರಿ ಗ್ರಾಮದ ಪರಮೇಶ್ ಚತ್ರಕೋಟಿ, ಹನಮಂತ ಸಿದ್ದಣ್ಣವರ, ಸಿದ್ದಪ್ಪ ಚಿಕ್ಕಣ್ಣವರ, ಯಲ್ಲಪ್ಪ ಕೆಮ್ಮಣಕೋಲ ಎಂಬುವವರ ಮೇಲೆ ಸರಕಾರಿ ಅಧಿಕಾರಿ ಕರ್ತವ್ಯದಲ್ಲಿರುವ ವೇಳೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಪಿಡಿಒ ಜಯಗೌಡ ಪಾಟೀಲ್ ಸಧ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


