Select Page

Advertisement

ಹೊಸ ಉದ್ಯಮ ಹುಟ್ಟುಹಾಕಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ : ರಾಜ್ಯಪಾಲ ಗೆಹ್ಲೋಟ್

ಹೊಸ ಉದ್ಯಮ ಹುಟ್ಟುಹಾಕಿ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ : ರಾಜ್ಯಪಾಲ ಗೆಹ್ಲೋಟ್

ಬೆಳಗಾವಿ : ಪದವೀಧರರು ತಮ್ಮ ನಾವಿನ್ಯತೆ ಮತ್ತು ಕ್ರೀಯಾಶೀಲ ಮನೋಭಾವವನ್ನು ಹೊಸ ಉದ್ಯಮಗಳನ್ನು ಹುಟ್ಟು ಹಾಕಿ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕು. ಸರ್ ಎಂ ವಿಶ್ವೇಶ್ವೇರಯ್ಯ ಹೆಸರು ಒಂದೇ ತಮ್ಮ ಸಾಧನೆಗೆ ಪ್ರೇರಣೆ ಆಗುತ್ತದೆ. ಹೊಸ ಉದ್ಯಮ ಹುಟ್ಟುಹಾಕಲು ಯುವಕರು ಶ್ರಮಿಸಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.

ಶುಕ್ರವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದ ಡಾ. ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಿದ್ದ ವಿಟಿಯು 25 ನೇ ವಾರ್ಷಿಕ ಘಟಿಕೋತ್ಸವ ಉದ್ದೇಶಿಸಿ ಇವರು ಮಾತನಾಡಿದರು. ಪದವಿ ಪಡೆದ ಯುವಕರು ಸ್ವಯಂ ಉದ್ಯೋಗ ಸೃಷ್ಟಿಸಿ ಸಮಾಜದ ಹತ್ತಾರು ಕೈಗಳಿಗೆ ಉದ್ಯೋಗ ನೀಡಬೇಕು.‌ ಅಷ್ಟೇ ಅಲ್ಲದೆ ಇವತ್ತಿನ ಪದವೀಧರರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು. ವಿಕಸಿತ ಭಾರತದ ದೃಷ್ಠಿಕೋನದೊಂದಿಗೆ  ನಮ್ಮ ಜವಾಬ್ದಾರಿ ಅರಿತು ನಮ್ಮ ರಾಷ್ಟ್ರವನ್ನು ಜಾಗತಿಕವಾಗಿ  ಶಕ್ತಿಯನ್ನಾಗಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಅಜಯ್ ಕುಮಾರ್ ಸೂದ್ ಅವರು ಮಾತನಾಡಿ, ನಿಮ್ಮ ಶೈಕ್ಷಣಿಕ ಪ್ರಯಾಣದ ಮುಕ್ತಾಯ ಮಾತ್ರವಲ್ಲ; ಇದು ಹೊಸ ಆರಂಭದ ಹೊಸ್ತಿಲು. ಈ ಹೊಸ ಆರಂಭದಲ್ಲಿ ತರಗತಿಗಳು ಮತ್ತು ಪರೀಕ್ಷೆಗಳ ಆಚೆಗಿನ ಜಗತ್ತಿಗೆ ಕಾಲಿಡುತ್ತಿದ್ದಿರಿ. ಹೊರ ಜಗತ್ತು ಸವಾಲುಗಳು ಮತ್ತು ಅವಕಾಶಗಳಿಂದ ತುಂಬಿದೆ ಎಂದು ಹೇಳಿದರು.

ಸ್ವಾತಂತ್ರ್ಯೋತ್ತರ ಕಾಲದಿಂದ ಭಾರತವು ಬಡತನದಿಂದ ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹತ್ವದ ಸ್ಥಾನದತ್ತ ಮುನ್ನುಗ್ಗುತ್ತಿದೆ. ಚಂದ್ರಯಾನ ಮತ್ತು ಮಂಗಳಯಾನ ಮುಂತಾದ ಬಾಹ್ಯಾಕಾಶ ಕಾರ್ಯಕ್ರಮಗಳು, ಯುಪಿಐಂತಹ ಡಿಜಿಟಲ್ ಪಾವತಿ ಕ್ರಾಂತಿಗಳು ಈ ನಿಟ್ಟಿನಲ್ಲಿ ನಿದರ್ಶನಗಳಾಗಿವೆ. “ವಿಕಸಿತ ಭಾರತ” ಎಂಬ ಕನಸು ಈಗ ತಲುಪಬಹುದಾದ ಗುರಿಯಾಗಿದ್ದು, ಈ ಸಾಧನೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕಾರಣವಾಗಲಿದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು  ವಿ ಟಿ ಯು ಅನುಷ್ಠಾನಗೊಳಿಸಲಾದ ಯೋಜೆನಗಳ ಬಗ್ಗೆ ಮಾಹಿತಿ ನೀಡಿದರು.  ವಿ ಟಿ ಯು ಇತ್ತೀಚಿನ ಸಾಧನೆಗಳ ಬಗ್ಗೆ ಹೇಳಿ ಅತಿಥಿಗಳನ್ನು ಪರಿಚಯಿಸಿ ಗೌರವ ಡಾಕ್ಟರೇಟ್ ಡಾಕ್ಟರ್ ಆಫ್ ಸೈನ್ಸ್ ಪದವಿ ಪುರಸ್ಕೃತರನ್ನು ಕುಲಾಧಿಪತಿಗಳ ಸಮ್ಮುಖದಲ್ಲಿ ಪರಿಚಯಿಸಿ ಪ್ರಸ್ತುತ ಪಡಿಸಿದರು.
 
ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಸ್ವರ್ಣ ಪದಕ ಪಡೆದ ಪದವೀಧರರು ಹಾಗೆಯೇ ಅವರು ಪಡೆದ ದತ್ತಿ ಬಹುಮಾನಗಳನ್ನು ವಿವರಿಸಿದರು. ಮೌಲ್ಯಮಾಪನ ದಂಡ (ಮೇಸ್) ವನ್ನು ಹಿಡಿದ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ  ಅವರು ಘಟಿಕೋತ್ಸವದ ಪಥಸಂಚಲನವನ್ನು ಮುನ್ನಡೆಸಿದರು.
 
ವಿಟಿಯು ನ ಡೀನ್ ಪ್ರೊ. ಸಂಜಯ್ ಎಚ್. ಎ. ಅವರು ಎಲ್ಲ ಪದವೀಧರರನ್ನು ಕುಲಾಧಿಪತಿಗಳ ಸಮ್ಮುಖದಲ್ಲಿ ಪ್ರಸ್ತುತ ಪಡಿಸಿದರು, ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಲ ಸದಸ್ಯರು ವೇದಿಕೆ ಮೇಲಿದ್ದರು.  ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಡಾ ಪ್ರಶಾಂತ ಕುಮಾರ ಜಿ. ಮತ್ತು ಪೋಷಕರು ಹಾಗೂ ವಿ ಟಿ ಯು ಸಿಬ್ಬಂದಿ ಹಾಜರಿದ್ದರು.

ಘಟಿಕೋತ್ಸವದಲ್ಲಿ 60,052 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಬಿಇ-58861, ಬಿಟೆಕ್‌- 117, ಬಿ.ಪ್ಲಾನ್‌- 10 ಬಿ.ಆರ್ಚ್- 1040, ಬಿಎಸ್‌ಸಿ- 24 ಹೀಗೆ ಒಟ್ಟು 60,052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಂಶೋಧನಾ ಪದವಿಗಳಾದ ಪಿಎಚ್‌ಡಿ-262 ಹಾಗೂ ಇಂಟಿಗ್ರೇಟೆಡ್‌ ಡುಯಲ್‌ ಡಿಗ್ರಿ-2 ಪದವಿಯನ್ನು ನೀಡಲಾಯಿತು.

ಈ ವೇಳೆ ವಿಜ್ಞಾನ, ತಾಂತ್ರಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಮತ್ತು ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿ ಡಾ.ವಿ.ನಾರಾಯಣನ್‌, ಎಕ್ಸೆಲ್‌ ಇಂಡಿಯಾ ಸಂಸ್ಥಾಪಕ, ಪದ್ಮಶ್ರೀ ಪುರಸ್ಕೃತ ಪ್ರಶಾಂತ ಪ್ರಕಾಶ ಮತ್ತು ಬೆಂಗಳೂರು ಎಟ್ರಿಯ ವಿಶ್ವವಿದ್ಯಾಲಯ ಕುಲಾಧಿಪತಿ ಸಿ.ಎಸ್‌.ಸುಂದರ ರಾಜು ಅವರಿಗೆ ಡಾಕ್ಟರ್‌ ಆಫ್‌ಸೈನ್‌ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು.




Advertisement

Leave a reply

Your email address will not be published. Required fields are marked *

error: Content is protected !!