ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ; ವಿಜಯೇಂದ್ರಗೆ ಸಿಹಿ, ಅಶೋಕ್ ಗೆ ಕಹಿ..?
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ದಟ್ಟವಾಗಿದ್ದು ಮುಂದಿನ ಅವಧಿಗೆ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಪಕ್ಷದ ಹೈಕಮಾಂಡ್ ಸಾಕಷ್ಟು ಕಸರತ್ತು ನಡೆಸಿದೆ.
ಸಧ್ಯ ಕರ್ನಾಟಕ, ಗುಜರಾತ್ ಹಾಗೂ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಾಕಿ ಇದ್ದು ಈ ಕುರಿತು ಮೂರ್ನಾಲ್ಕು ದಿನಗಳಲ್ಲಿ ನೇಮಕ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕದಲ್ಲಿ ಚುನಾವಣೆ ಮೂಲಕ ರಾಜ್ಯಾಧ್ಯಕ್ಷರ ಆಯ್ಕೆಗೆ ಸಿದ್ಧತೆ ನಡೆದಿದೆ.
ಯಡಿಯೂರಪ್ಪ ಬಣದ ಮೇಲೆ ಭರವಸೆ ಹೊಂದಿರುವ ಬಿಜೆಪಿ ಹೈಕಮಾಂಡ್ ರೆಬೆಲ್ ತಂಡದ ಮಾತಿಗೆ ಅಷ್ಟೊಂದು ಬೆಲೆ ನೀಡುತ್ತಿಲ್ಲ. ಒಂದುವೇಳೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಯನ್ನು ಬಿಜೆಪಿ ಹೈಕಮಾಂಡ್ ಅರಿತಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ಮೂರು ವರ್ಷಕ್ಕೆ ಬಿ.ವೈ ವಿಜಯೇಂದ್ರ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷ ಹುದ್ದೇಗೆ ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು ಚುನಾವಣೆ ಮೂಲಕವೇ ಆಯ್ಕೆಗೆ ಮುಂದಾಗಿದೆ. ಮಧ್ಯೆ ಸ್ವತಃ ವಿಜಯೇಂದ್ರ ಅವರು ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮುಂದುವರಿಸಿದ್ದಾರೆ.
ಇನ್ನೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ಕೈ ಬಿಟ್ಟು ಅವರ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಒಕ್ಕಲಿಗ ಅಥವಾ ಹಿಂದುಳಿದ ವರ್ಗದ ನಾಯಕನ ಆಯ್ಕೆಗೆ ಒಲವು ತೋರಲಾಗುತ್ತಿದೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.


