ವಾಲ್ಮೀಕಿ ಭವನ ನಿರ್ಮಾಣ ವಿಚಾರ ; ಎಸ್ಸಿ, ಎಸ್ಟಿ ಸಮುದಾಯದ ಜನರ ಮಧ್ಯೆ ಮಾರಾಮಾರಿ..! Video
ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ.
ಮನೆಗೆ ನುಗ್ಗಿ ಅಟ್ಟಹಾಸ ಮೆರೆದ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಿದವರನ್ನೇ ಬೆಚ್ಚಿ ಬೀಳಿಸುತ್ತಿವೆ. ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಗಲಾಟೆ ಉಂಟಾಗಿದೆ. ಗುಂಪು ಕಟ್ಟಿಕೊಂಡು ಬಂದ ಕೆಲವರು ಒಂದು ಸಮುದಾಯದವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಮನೆ ಒಳಗೆ ಅಡಗಿ ಕುಳಿತವರ ಮೇಲೆಯೂ ಹಲ್ಲೆ ಕಲ್ಲು, ಕಟ್ಟಿಗೆಯಿಂದ ಬಾಗಿಲು ಮುರಿದು ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಸದಾಶಿವ ಭಜಂತ್ರಿ ಎಂಬುವವರ ಮನೆಯ ಮೇಲೆ ಮನಬಂದಂತೆ ಕಲ್ಲು ತೂರಾಟ ನಡೆದಿದ್ದು, ಶೌಚಾಲಯ, ಮನೆ ಮಾಳಿಗೆ ಸೇರಿದಂತೆ ಹಲವು ಭಾಗಗಳು ಧ್ವಂಸಗೊಂಡಿವೆ.
ಮನೆಯಲ್ಲಿದ್ದ ವಸ್ತುಗಳು ಪುಡಿ ಪುಡಿಯಾಗಿದ್ದು, ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಎರಡು ಕಡೆಯವರ ನಡುವೆ ವಾಗ್ವಾದ ಮುಂದುವರಿತ್ತು.
ಮಹಿಳೆಯರನ್ನೂ ಲೆಕ್ಕಿಸದೆ ಪುರುಷರಿಂದ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ.
ಈ ಗಲಾಟೆಯಲ್ಲಿ ಎರಡೂ ಸಮುದಾಯದ ಕೆಲವರಿಗೆ ಗಾಯಗಳಾಗಿವೆ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಜಾಗ ಸರ್ವೇಗಾಗಿ ವಾಲ್ಮೀಕಿ ಸಮುದಾಯದ ಯುವಕರು ಆಗಮಿಸಿದ್ದ ವೇಳೆ, ಎಸ್ಸಿ ಸಮುದಾಯದ ಮನೆಯ ಬಳಿ ಯಾಕೆ ಸರ್ವೇ ಎಂದು ಸದಾಶಿವ ಭಜಂತ್ರಿ ಕುಟುಂಬ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಉದ್ರಿಕ್ತಗೊಂಡ ಗುಂಪು ಕಲ್ಲು ತೂರಾಟ ನಡೆಸಿದ್ದಾರೆ. ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


