
ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ತುಮಕೂರು : ತುಮಕೂರಿನಲ್ಲಿ ಭೀಕರ ಕೃತ್ಯವೊಂದು ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ 4 ವರ್ಷ ಮತ್ತು 2 ವರ್ಷದ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ತಾಯಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಈ ಕೃತ್ಯ ಎಸಗಿರಬಹುದು ಎಂದು ಅನುಮಾನಿಸಲಾಗಿದೆ.ಈ ಬಗ್ಗೆ ತನಿಖೆ ನಡೆಯುತ್ತಿದೆ.
ರಾಜ್ಯದಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದ್ದು, ಪತಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಡಪನಕೆರೆಯಲ್ಲಿ ಈ ದುರಂತ ಘಟನೆ ನಡೆದಿದ್ದು, ಇಬ್ಬರು ಮುದ್ದು ಮಕ್ಕಳನ್ನು ಕೊಂದ ತಾಯಿ ತಾನೂ ನೇಣಿಗೆ ಶರಣಾಗಿದ್ದಾರೆ.
23 ವರ್ಷದ ಸರಿತಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಆತ್ಮಹತ್ಯೆಗೂ (Suicide) ಮುನ್ನ 4 ವರ್ಷದ ಮಗ ಕೌಶಿಕ್ ಹಾಗೂ 2 ವರ್ಷದ ಮಗು ಯುಕ್ತಿಯನ್ನು ಕೊಲೆ ಮಾಡಿದ್ದಾರೆ. ಬಳಿಕ ತಾವೂ ಸಾವನ್ನಪ್ಪಿದ್ದಾರೆ.
ಈ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸರಿತಾ ತನ್ನ ಇಬ್ಬರು ಮಕ್ಕಳ ಹತ್ಯೆಗೈದಿದ್ದು, ಬಳಿಕ ತಾನು ನೇಣಿಗೆ ಶರಣಾಗಿದ್ದಾರೆ.
ಮೂಲತಃ ಕಡಪನಕೆರೆಯ ಸರಿತಾ ತನ್ನದೇ ಊರಿನ ಸಂತೋಷ್ ಜೊತೆ ವಿವಾಹವಾಗಿದ್ದರು. ಕಳೆದ 6 ವರ್ಷಗಳ ಹಿಂದೆ ಸಂತೋಷ್ ಜೊತೆ ವಿವಾಹವಾಗಿತ್ತು. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಸಂತೋಷ್ ಈ ಘಟನೆ ನಡೆದ ವೇಳೆ ಮನೆಯಲ್ಲಿರಲಿಲ್ಲ.
ಮದುವೆಯಾದಾಗಿನಿಂದ ಪತಿ ಹಾಗೂ ಆತನ ಕುಟುಂಬದಿಂದ ಸರಿತಾ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ವರದಕ್ಷಿಣೆ ಕಿರುಕುಳ ನೀಡಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ತಾಯಿ ಸರಿತಾ ನೊಂದು ಮಕ್ಕಳ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.