ಕಲಬುರಗಿ: ಹಿಂದೂ ಧರ್ಮ ರಕ್ಷಣೆ, ಸಂಸ್ಕೃತಿ ಕುರಿತು ಖಡಕ್ ಹೇಳಿಕೆಗಳಿಂದ ಗಮನ ಸೆಳೆದಿದ್ದ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಇದೀಗ ವಿಭಿನ್ನ ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಶ್ರಾವಣ ಮಾಸದ ಆರಂಭದಲ್ಲೇ ಸ್ವಾಮೀಜಿಯವರ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಕಾವಿಧಾರಿ ಸ್ವಾಮೀಜಿ ಕೈಯಲ್ಲಿ ಮೈಕ್ ಹಿಡಿದು ‘ಯಾರಿವಳು ಯಾರಿವಳು’ ಎಂಬ ಸಿನೆಮಾ ಹಾಡನ್ನು ಹಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಎದುರುಗಡೆ ಮದ್ಯದ ಬಾಟಲ್‌ಗಳಂತಿರುವ ಬಾಟಲ್‌ಗಳು ಕಾಣಿಸಿಕೊಂಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈ ಹಿಂದೆ ‘ಹಿಂದೂ ಧರ್ಮ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲಿಗೆ ಖಡ್ಗ ಕೊಡಿ’ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದ ಇದೇ ಸ್ವಾಮೀಜಿಯವರ ಇದೀಗ ಮಠದಲ್ಲಿನ ಎನ್ನಲಾದ ಬಿಂದಾಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋ ವೈರಲ್ ಬೆನ್ನಲ್ಲೇ ‘ಧರ್ಮ ಬೋಧಿಸುವ ಸ್ವಾಮೀಜಿಯವರ ಈ ಹಾಡಿನ ಗತ್ತು ಏನು?’ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಆದರೆ, ವಿಡಿಯೋ ಯಾವ ಸಂದರ್ಭದಲ್ಲಿನದ್ದು ಹಾಗೂ ಎದುರಿಗಿರುವ ಬಾಟಲ್‌ಗಳಲ್ಲಿ ಏನಿತ್ತು ಎಂಬುದರ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.