ಅಥಣಿ : SSLC ಪರೀಕ್ಷಾ ಕೇಂದ್ರದಲ್ಲಿ ಅಕ್ರಮ : ಕರ್ತವ್ಯ ನಿರತ ಶಿಕ್ಷಕ ಅಮಾನತು
ಅಥಣಿ : ತಾಲೂಕಿನ ತೆಲಸಂಗ ಗ್ರಾಮದ SSLC ಪರೀಕ್ಷಾ ಕೇಂದ್ರದಲ್ಲಿ ಕಳೆದ ದಿನಾಂಕ 21 ಮತ್ತು 24 ರಂದು ನಡೆದ ಕನ್ನಡ ಮತ್ತು ಗಣಿತ ಭಾಷಾ ಪರೀಕ್ಷೆಯ ಕೊಠಡಿಗಳಲ್ಲಿ ಅಕ್ರಮ ಎಸಗಿದ್ದು ಕಂಡುಬಂದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಮೇಲ್ವಿಚಾರಕರಾಗಿ ಕೊಠಡಿ ಸಂಖ್ಯೆ 10 ರಲ್ಲಿ ಕಾರ್ಯ ನಿರ್ವಹಿಸಿರುವ ಸಂದರ್ಭದಲ್ಲಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಕೆಲವೊಂದು ಉತ್ತರಗಳನ್ನು ಹೇಳಿ ಕೊಟ್ಟಿರುವ ಬಗ್ಗೆ, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ದೃಶ್ಯಾವಳಿಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಐಗಳಿ ತೋಟದ ಶಾಲೆಯ ಶಿಕ್ಷಕ ವಿ.ಕೆ.ಪವಾರ ಅವರನ್ನು ಅಮಾನತುಗೊಳಿಸಿ ಚಿಕ್ಕೋಡಿ ಡಿಡಿಪಿಐ ಆರ್.ಎಸ್.ಸೀತಾರಾಮು ಆದೇಶ ಹೊರಡಿಸಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುವುದನ್ನು, ಅಕ್ರಮ ಎಸಗುವುದನ್ನು ತಡೆಗಟ್ಟಬೇಕಾದ ಕೊಠಡಿಯ ಮೇಲ್ವಿಚಾರಕ ಶಿಕ್ಷಕ ಎಸ್.ಎಸ್.ಎಲ್.ಸಿ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಕ್ಷೇತ್ರಶಿಕ್ಷಣಾಕಾರಿ ಎಂ ಬಿ ಮೋರಟಗಿ ಇವರು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಶಿಕ್ಷಕರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಿಫಾರಸ್ಸು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಚಿಕ್ಕೋಡಿ ಡಿಡಿಪಿಐ ಆರ್.ಎಸ್.ಸೀತಾರಾಮು ಅವರು ಕರ್ತವ್ಯ ಲೋಕಗಿಸಿದ ಶಿಕ್ಷಕನನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.


