ಸವದತ್ತಿಯಲ್ಲಿ ಮೂರು ವರ್ಷದ ಮಗುವನ್ನು ಕೊಂದ ಕಿರಾತಕರು
ಬೆಳಗಾವಿ : ಪತ್ನಿಯ ಮೊದಲ ಗಂಡನ ಮೂರು ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ ಮಲತಂದೆ ಹಾಗೂ ಕೊಲೆಗೆ ಪ್ರಚೋದನೆ ನೀಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮುರುಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಸವದತ್ತಿ ತಾಲೂಕಿನ ಹಾರುಗೊಪ್ಪ ಗ್ರಾಮದ ರಂಗೀಲಾ ಮಾಂಜಿ ಎಂಬ ಮಹಿಳೆ ಗ್ರಾಮದ ಮಹೇಶ ಮಾಂಜಿ ಎಂಬಾತನ ಜೊತೆ ಎರಡನೇ ಮದುವೆಯಾಗಿದ್ದಳು. ಮೊದಲ ಪತಿಯಿಂದ ಮೂರು ವರ್ಷದ ಮಗುವಿನ ಜೊತೆ ಮಹಿಳೆ ಮಹೇಶ್ ಜೊತೆ ವಾಸವಿದ್ದಳು. ಆದರೆ ಮಗುವನ್ನು ನೋಡಿದರೆ ನನಗೆ ಆಗಿಬರುವುದಿಲ್ಲ. ಎಲ್ಲಿಯಾದರೂ ಬಿಟ್ಟುಬಿಡು ಎಂದು ಆರೋಪಿ ಮಹೇಶ್ ಮಾಂಜಿ ಆಗಾಗ್ಗೆ ಪೀಡಿಸುತ್ತಿದ್ದ.
ಮಗಿವಿನ ವಿಚಾರವಾಗಿ ಆರೋಪಿ ಮಹೇಶ್ ಹಾಗೂ ರಂಗೀಲಾ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಮೂರು ವರ್ಷದ ಮಗುವನ್ನು ಮಹೇಶ್ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಇನ್ನುಳಿದ ಮೂವರು ಆರೋಪಿಗಳು ಕೊಲೆಗೆ ಪ್ರಚೋದನೆ ನೀಡಿದ್ದು ಈ ಸಂದರ್ಭದಲ್ಲಿ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಗುವಿನ ಮಲತಂದೆ ಹಾಗೂ ಆತನ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.


