ಬೆಂಗಳೂರು: ರಾಜ್ಯದಲ್ಲಿ (Karnataka) ಸದ್ಯ ಸದ್ದು ಮಾಡುತ್ತಿರುವ ವಿವಿಧ ಹಗರಣಗಳು ಹಾಗೂ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ನಿವಾಸದ ಮೇಲಿನ ಜಾರಿ ನಿರ್ದೇಶನಾಲಯದ (ED) ದಾಳಿಯ (Raid) ಬೆನ್ನಲ್ಲೇ, ಜಾರಿ ನಿರ್ದೇಶನಾಲಯದ ನಿರ್ದೇಶಕ ರಾಹುಲ್ ನವೀನ್ (Rahul Navin) ಅವರು ದಿಢೀರ್ ಬೆಂಗಳೂರಿಗೆ ಆಗಮಿಸಿದ್ದಾರೆ.

ರಾಜಧಾನಿ ಬೆಂಗಳೂರಿಗೆ ಶುಕ್ರವಾರ ರಾತ್ರಿ ನವದೆಹಲಿಯಿಂದ ಏರ್ ಇಂಡಿಯಾ ವಿಮಾನದ ಮೂಲಕ ಆಗಮಿಸಿದ ಅವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಕೆಪಿಎಸ್‌ಸಿ ನೇಮಕಾತಿ ಅಕ್ರಮ, ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ಇಡಿ ದಾಳಿ, ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣಗಳ ತನಿಖೆಯ ಪ್ರಗತಿ ಪರಿಶೀಲನೆ ನಡೆಸಲು ಅವರು ಖುದ್ದು ಅಖಾಡಕ್ಕಿಳಿದಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರಿನಲ್ಲೇ ತಂಗಲಿರುವ ಅವರು, ಎರಡು ರಾಜ್ಯಗಳಿಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳ ಪ್ರಗತಿ ಪರಿಶೀಲನೆಯನ್ನು ಹಿರಿಯ ಅಧಿಕಾರಿಗಳೊಂದಿಗೆ ನಡೆಸಲಿದ್ದಾರೆ.

ಇಡಿ ನಿರ್ದೇಶಕರ ಈ ದಿಢೀರ್ ಭೇಟಿಯು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ.