ಬೆಳಗಾವಿ : ಲೋಕೋಪಯೋಗಿ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಖಾಸಗಿ ಸಂಸ್ಥೆಯಿಂದ ಲಂಚ ಪಡೆದಿದ್ದು ಈ ಹಣವನ್ನು ಸಚಿವ ಸತೀಶ್ ಜಾರಕಿಹೊಳಿ ವಿದೇಶದಲ್ಲಿ ಆಸ್ತಿ ಸಂಪಾದನೆಗೆ ಬಳಸಿದ್ದಾರೆ ಎಂಬ ಆರೋಪದ ಕುರಿತು ದಾಳಿ ನಡೆಸಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಸ್ಪೋಟಕ ಅಂಶ ಬಯಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆ ಪಡೆಯಲು
ಬಿವಿಇಪಿಎಲ್ (ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್) ಸಂಸ್ಥೆಯಿಂದ ಅಪಾರ ಪ್ರಮಾಣದಲ್ಲಿ ಲಂಚ ಪಡೆದು ಈ ಹಣದಿಂದ ವಿದೇಶದಲ್ಲಿ ಆಸ್ತಿ ಖರೀದಿ ಮಾಡಿರುವ ಆರೋಪದ ಮೇಲೆ ಇಡಿ ದಾಳಿ ನಡೆಸಿದೆ. ಈ ವೇಳೆ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರನಿಂದ ಲಂಚ ಪಡೆದ ಕುರಿತು ದಾಖಲೆಗಳು ಲಭ್ಯವಾಗಿವೆ ಎಂದು ಇಡಿ ಹೊರಡಿಸಿದ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೆ. 9 ಹಾಗೂ 10 ರಂದು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆ ಸೇರಿ ಒಟ್ಟು 21 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಮಹಾದೇವಿ ಮಂಜುನಾಥ, ವೈ,ಡಿ ಮಂಜುನಾಥ, ಮಲಗೌಡ ಪಾಟೀಲ್, ಗಿರಿಶ್ ನೋನವಾಲ್ಕರ್ ಸೇರಿದಂತೆ ಒಟ್ಟು ಹತ್ತು ಜನರ ಮೇಲೆ ಇಡಿ ದಾಳಿ ನಡೆದಿದೆ. ಈ ವೇಳೆ 3.3 ಕೋಟಿ ನಗದು ಹಾಗೆಯೇ 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು, ಬೆಳಗಾವಿ, ಗೋವಾ, ಕಲ್ಕತ್ತಾ ಸೇರಿ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.
ಇಡಿ ದಾಳಿಯ ವೇಳೆ ಸಚಿವ ಸತೀಶ್ ಜಾರಕಿಹೊಳಿ ಕುಟುಂಬ ವಿದೇಶದಲ್ಲಿ ಹೂಡಿಕೆ ಮಾಡಿರುವ ದಾಖಲೆಗಳು ಪತ್ತೆಯಾಗಿವೆ. ಕಾಂಗೋ ದೇಶದಲ್ಲಿರುವ ಗಣಿಗಾರಿಕೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ 40 ಪ್ರತಿಶತ ಶೇರು ಹೊಂದಿರುವುದಾಗಿ ತಿಳಿದುಬಂದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ಕೆ (ಫೆಮಾ) ಅಡಿಯಲ್ಲಿ ವಿದೇಶದಲ್ಲಿ ನಡೆದ ಹಣಕಾಸು ಅಕ್ರಮಗಳ ಕುರಿತು ತನಿಖೆ ಮುಂದುವರಿಸಿದ್ದಾಗಿ ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.



