ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಬಿಜೆಪಿಯವರು ರಾಜಕೀಯಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಿಡಿಕಾರಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಸಂಬಂಧಿಕರ ಮನೆ ಮೇಲೆ ಇಡಿ ದಾಳಿ ಬಗ್ಗೆ ಕೇಳಿದಾಗ, “ಈ ಹಿಂದೆಯೂ ದಾಳಿ ಮಾಡಿದ್ದರು. ಸತೀಶ್ ಜಾರಕಿಹೊಳಿ ಹಿರಿಯ ಸಚಿವರಾಗಿದ್ದು, ರಾಜಕಾರಣದ ಜತೆಗೆ ವ್ಯವಹಾರ ಮತ್ತು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು ಕಾನೂನಿನ ಚೌಕಟ್ಟಿನಲ್ಲೇ ವ್ಯವಹಾರ ನಡೆಸುತ್ತಿದ್ದಾರೆ.

ಇಡಿ ಕೇಳುವ ಪ್ರಶ್ನೆಗಳಿಗೆ ಸತೀಶ್ ಜಾರಕಿಹೊಳಿ ಸೂಕ್ತ ಉತ್ತರ ನೀಡಲಿದ್ದಾರೆ. ಹೀಗಾಗಿ ಯಾರೂ ಗಾಬರಿಯಾಗಬೇಕಿಲ್ಲ. ಸಂಬಂಧಿಕರ ವ್ಯವಹಾರಗಳ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಸತೀಶ್ ಜಾರಕಿಹೊಳಿ ಪ್ರಾಮಾಣಿಕ ರಾಜಕಾರಣಿ, ಅವರು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನಮಗಿದೆ” ಎಂದರು.

“ರಾಜ್ಯ ಸರ್ಕಾರಕ್ಕೆ 100 ದಿನ ಪೂರ್ಣಗೊಳ್ಳಲಿದ್ದು, ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಸಂದರ್ಭದಲ್ಲಿ ಇಂತಹ ತನಿಖಾ ಕ್ರಮಗಳು ನಡೆಯುತ್ತಿರುವುದು ರಾಜಕೀಯ ಉದ್ದೇಶ ಹೊಂದಿದೆ. ನಮ್ಮ ಸರ್ಕಾರ ಮತ್ತು ಪಕ್ಷವನ್ನು ಎಲ್ಲ ಕಡೆಗಳಿಂದಲೂ ಟಾರ್ಗೆಟ್ ಮಾಡಲಾಗುತ್ತಿದೆ. 100 ದಿನಗಳ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗಿದೆ” ಎಂದು ಆರೋಪಿಸಿದರು.

ಬಿಜೆಪಿಯವರು ದಲಿತ ನಾಯಕರ ಬೆಳವಣಿಗೆ ಸಹಿಸಲಾಗುತ್ತಿಲ್ಲ : “ಸತೀಶ್ ಜಾರಕಿಹೊಳಿ ಅವರು ಪ್ರಬಲವಾಗಿ ಬೆಳೆಯುತ್ತಿರುವ ನಾಯಕನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಅವರನ್ನು ರಾಜಕೀಯವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಅವರ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಆಗದೆ ತೊಂದರೆ ಕೊಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಅವರಿಗೆ ತಿರುಗುಬಾಣವಾಗಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನನ್ನ ಮೇಲೂ ದಾಳಿ ಮಾಡಿ ಬಂಧಿಸಿದ್ದರು. ಆದರೆ ಇಂದು ಏನಾಗಿದೆ? ನಾನು ರಾಜ್ಯದ ಸಿಎಂ ಆಗಿರುವೆ” ಎಂದರು.

“ಮೊದಲು ನಾಗೇಂದ್ರ ಅವರ ಮೇಲೆ ದಾಳಿ ಮಾಡಿದರು. ನಾನು ಈ ಪ್ರಕರಣ ಪರಿಶೀಲನೆ ಮಾಡಿದೆ. ಯಾವುದೇ ತಪ್ಪು ಮಾಡಿರಲಿಲ್ಲ. ಬಿಜೆಪಿಯವರ ತಲೆಯಲ್ಲಿ ಏನೂ ಇಲ್ಲ. ತನಿಖೆ ಮಾಡಿಸಿದ್ದೇವೆ. ಬ್ಯಾಂಕ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಹೇಳಿದ್ದು ನಾವೆ. ಆ ಹಣವನ್ನು ವಾಪಸ್ ಪಡೆಯಲಾಗಿದೆ. ಇಡಿ, ಸಿಬಿಐ ಕೈಲಿ ಒಂದು ರೂ ವಾಪಸ್ ಪಡೆಯಲು ಆಗಿಲ್ಲ. ₹84 ಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದ್ದರು. ಬಳಿಕ ಸಿಐಡಿ ಹಾಗೂ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿ ₹79 ಕೋಟಿ ಹಣವನ್ನು ವಾಪಸ್ ಪಡೆದಿದ್ದಾರೆ. ಇನ್ನೂ ₹5 ಕೋಟಿ ಮಾತ್ರ ಬಾಕಿ ಉಳಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ ಬಳಿಕವೂ ಈ ವಿಚಾರವನ್ನು ರಾಜಕೀಯಗೊಳಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

“ತನಿಖೆ ನಡೆಸಿ ಕ್ರಮ ಕೈಗೊಂಡಿರುವ ಸರ್ಕಾರದ ವಿರುದ್ಧವೇ ಬಿಜೆಪಿ ರಾಜಕೀಯ ಆರೋಪ ಮಾಡುತ್ತಿರುವುದು ಸರಿಯಲ್ಲ. ಈಗ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಿಂದೆ ಬಿದ್ದಿದ್ದಾರೆ. ಕೆಪಿಎಸ್ ಸಿ ವಿಚಾರದಲ್ಲಿ ಅವರನ್ನು ನೇಮಕ ಮಾಡಿದ್ದು ಯಾರು? ಈಗ ನಾನು ಈ ಬಗ್ಗೆ ಮಾತನಾಡುವುದಿಲ್ಲ. ತನಿಖೆ ನಡೆಯಲಿ.” ಎಂದರು.

ಎಲ್ಲ ಶಾಸಕರು, ಸಚಿವರಿಗೆ ಎಚ್ಚರಿಕೆ ನೀಡಿದ್ದೇನೆ : “ಮುಂದಿನ ದಿನಗಳಲ್ಲಿ ಇನ್ನೂ ಹಲವು ಕಾಂಗ್ರೆಸ್ ನಾಯಕರು, ಸಚಿವರು ಮತ್ತು ಶಾಸಕರ ಮೇಲೂ ತನಿಖಾ ಸಂಸ್ಥೆಗಳ ಕ್ರಮ ನಡೆಯುವ ಸಾಧ್ಯತೆ ಇದೆ. ಪಕ್ಷದ ಎಲ್ಲ ಶಾಸಕರು ಮತ್ತು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ತನಿಖೆಗೆ ನಾವು ಹೆದರುವುದಿಲ್ಲ. ಆದರೆ ಸುಳ್ಳು ಕಥೆ ಕಟ್ಟುವುದು, ಸುಳ್ಳು ಆರೋಪ ಮಾಡುವುದು ಹಾಗೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಖಂಡಿಸುತ್ತೇವೆ. ಬಿಜೆಪಿ ನಾಯಕರ ವಿರುದ್ಧ ಮಾತ್ರ ಯಾವುದೇ ದಾಳಿ ನಡೆಯುವುದಿಲ್ಲ. ಬೋವಿ ಹಗರಣದ ಬಗ್ಗೆ ಇಡಿ ಅವರು ಯಾಕೆ ಪ್ರವೇಶ ಮಾಡಲಿಲ್ಲ. ಬಿಡದಿ, ನೈಸ್ ಯೋಜನೆಗೆ ಸಹಿ ಹಾಕಿ ಆರಂಭಿಸಿದವರು ಅವರೇ ಆದರೆ ಆರೋಪ ಮಾಡುವುದು ನಮ್ಮ ವಿರುದ್ಧ. ಸತ್ಯ ಆಚೆ ಬರಲಿದೆ” ಎಂದರು.

ಕಾಂಗ್ರೆಸ್ ಸರ್ಕಾರ ಸಚಿವ ಸತೀಶ್ ಜಾರಕಿಹೊಳಿಯವರ ಬೆಂಬಲಕ್ಕೆ ನಿಲ್ಲುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನಾವು ನೂರಕ್ಕೆ ನೂರು ಬೆಂಬಲ ನೀಡುತ್ತೇವೆ. ಸಚಿವರ ಕುಟುಂಬದವರ ಮೇಲೆಯೂ ಇಡಿ ದಾಳಿ ನಡೆಸಿರುವುದು ದುರದೃಷ್ಟಕರ.ಇಡಿ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಅವರು ಸಮರ್ಥವಾಗಿ ಉತ್ತರ ನೀಡುತ್ತಾರೆ. ಅವರು ಒಬ್ಬ ಪ್ರಗತಿಪರ,ದೂರದೃಷ್ಠಿಯುಳ್ಳ ಪ್ರಾಮಾಣಿಕ ರಾಜಕಾರಣಿ, ಅವರು ಯಾವುದೇ ತಪ್ಪು ಎಸಗಿಲ್ಲ ಎಂಬ ವಿಶ್ವಾಸ ನನಗಿದೆ ಎಂದರು.