ಧರ್ಮ ವಿರೋಧಿ ಬಿರುಗಾಳಿಗೆ ಅಂತ್ಯವಿದೆ ; ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಬಿ.ಎಲ್ ಸಂತೋಷ ವಾಗ್ದಾಳಿ
ಬೆಳಗಾವಿ : ಸ್ಮಶಾನದಲ್ಲಿ ಊಟ ಮಾಡುತ್ತೇವೆ, ಮದುವೆ ಮಾಡಿಸುತ್ತೇವೆ ಎಂಬ ವಿಚಿತ್ರ ಪ್ರಕೃತಿ ಬೆಳೆಯುತ್ತಿರುವ ಸಾಮ್ರಾಜ್ಯದಲ್ಲಿ ನಾವಿದ್ದೇವೆ. ಇದರಿಂದ ಮಾಡಿದವನಿಗೆ ನಷ್ಟ ಹೊರತು ಸಮಾಜಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಪರೋಕ್ಷವಾಗಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಬಿಜೆಪಿ
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹರಿಹಾಯ್ದರು.
ಮಂಗಳವಾರ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಲಿ. ಸಿದ್ದೇಶ್ವರ ಶ್ರೀಗಳ ಗುರುದೇವ ತಪೋವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ರಿಪಬ್ಲಿಕ್ ಎನ್ನುವ ಜಾಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಧರ್ಮದ ವಿಚಾರದಲ್ಲಿ ವಿತಂಡವಾದ ಮಾಡಬಾರದು. ರಾಜಕಾರಣಿ ಮಾಡಲು ಸಾಕಷ್ಟು ವಿಷಯಗಳಿವೆ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಧರ್ಮಕ್ಕೆ ವಿರೋಧವಾಗಿರುವ ಬಿರುಗಾಳಿ ವಿರುದ್ಧ ಈ ತಪೋವನ ತಂಗಾಳಿ ಬೀಸುತ್ತದೆ ಎಂದರು.
ಒತ್ತಡದ ಕಾರಣಕ್ಕೆ ಅನೇಕರು ವೇದಿಕೆ ಹಂಚಿಕೊಂಡಿಲ್ಲ. ನಮಗೆ ಎಲ್ಲದರ ಅರಿವು ಇತ್ತು. ನಮ್ಮ ಕಲ್ಪನೆ ಮೀರಿ ಕಾರ್ಯಕ್ರಮ ಯಶಸ್ವಿಯಾಗಿದೆ. ಲೆಕ್ಕಾಚಾರದ ಕಾರಣಕ್ಕೆ ಕಾರ್ಯಕ್ರಮದಿಂದ ದೂರ ಇದ್ದವರು ಇಂದಲ್ಲ ನಾಳೆ ತಪೋವನದಕ್ಕೆ ಬರುವ ಪರಿಸ್ಥಿತಿ ಬರುತ್ತದೆ. ಸದಾಶಿವಾನಂದ ಶ್ರೀಗಳ ಮಹತ್ವದ ಕಾರ್ಯಕ್ಕೆ ಬಿ.ಎಲ್.ಸಂತೋಷ್ ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ ಸಮಾಜಕ್ಕೆ ಬೆಳಕು ನೀಡಿ ದಾರಿ ತೋರಿದ ಮಹಾನ್ ಚೇತನ ಸಿದ್ದೇಶ್ವರ ಶ್ರೀಗಳು. ಶ್ರೀಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಲು ಗುರುದೇವ ತಪೋವನ ದಾರಿಯಾಗಲಿದೆ. ಅದೆಷ್ಟೋ ಅಡಚಣೆ ಮಧ್ಯೆ ಸುಂದರ ತಾಣ ನಿರ್ಮಾಣವಾಗಿದ್ದು ನಮಗೆಲ್ಲ ಸಂತಸ ತರಿಸಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಬೃಹನ್ಮಠ ಮಹಾಸಂಸ್ಥಾನದ ಸದಾಶಿವಾನಂದ ಭಾರತಿ ಸ್ವಾಮಿಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ರಮೇಶ್ ಕತ್ತಿ, ಶಾಸಕರಾದ ಅಭಯ್ ಪಾಟೀಲ್, ಮಹೇಶ್ ತೆಂಗಿನಕಾಯಿ, ದುರ್ಯೋಧನ ಐಹೊಳೆ, ನಿಖಿಲ್ ಕತ್ತಿ, ಸಂಘದ ಪ್ರಮುಖರಾದ ಅರವಿಂದರಾವ್ ದೇಶಪಾಂಡೆ ಮುಖಂಡರಾದ ಬಸವರಾಜ ಹುಂದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


