Select Page

Advertisement

ರೇಣುಕಾಚಾರ್ಯರು ಜಾತಿ, ವರ್ಣ ಭೇದವಿಲ್ಲದೆ ಭಕ್ತಿ ಮಾರ್ಗ ಸಾರಿದ ತತ್ವಜ್ಞಾನಿ : ಹುಕ್ಕೇರಿ ಶ್ರೀ

ರೇಣುಕಾಚಾರ್ಯರು ಜಾತಿ, ವರ್ಣ ಭೇದವಿಲ್ಲದೆ ಭಕ್ತಿ ಮಾರ್ಗ ಸಾರಿದ ತತ್ವಜ್ಞಾನಿ : ಹುಕ್ಕೇರಿ ಶ್ರೀ



ಬೆಳಗಾವಿ : ಶ್ರೀ ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಪಂಥಗಳಿಗೆ ಸೇರಿದವರಲ್ಲ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿದವರು. ಜಾತಿ, ವರ್ಣ ಭೇದವಿಲ್ಲದೆ ಭಕ್ತಿ ಮಾರ್ಗವನ್ನು ಸಾರಿದ ಮಹಾನ್ ತತ್ವಜ್ಞಾನಿ ಎಂದು ಹುಕ್ಕೇರಿಯ ಶ್ರೀ ಗುರು ಶಾಂತೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಭಾನುವಾರ (ಮಾ.01) ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ-2026ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇಣುಕಾಚಾರ್ಯರ ಕಾಲದಲ್ಲಿ ಎಲ್ಲ ಸಮುದಾಯದವರನ್ನು ಸೇರಿಸಿಕೊಂಡು ಮಠಗಳನ್ನು ಸ್ಥಾಪಿಸಿ ವಚನ ಸಾಹಿತ್ಯಗಳನ್ನು ಹಾಗೂ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದವರು. ಅದೇ ರೀತಿಯಲ್ಲಿ ಇಂದಿನ ಕಾಲದಲ್ಲಿ ಎಲ್ಲ ವರ್ಗದವರು ಸೇರಿ ಎಲ್ಲಾ ಸಮುದಾಯದ ಮಹಾತ್ಮರ ಜಯಂತಿಯ ಕಾರ್ಯಕ್ರಮಗಳನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.

ಗುರುವನ್ನು ಯಾವಾಗಲೂ ಸ್ಮರಣೆ ಮಾಡಬೇಕು. ಗುರುವನ್ನು ಯಾರೂ ಟೀಕೆ ಮಾಡಬಾರದು. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಎಲ್ಲಾ ಸಮುದಾಯದವರು ಸೇರಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು. 

ರೇಣುಕಾಚಾರ್ಯರು ಒಳ್ಳೆಯ ಧಾರ್ಮಿಕ ಹೆಜ್ಜೆಯ ಗುರುತುಗಳನ್ನು ಇಟ್ಟುಹೋಗಿದ್ದಾರೆ. ಅವರ ಹೆಜ್ಜೆಗಳನ್ನು ನಾವು ಅನುಸರಿಸುತ್ತಾ ಹೋಗಬೇಕಾಗಿದೆ. ಜಗದ್ಗುರು ರೇಣುಕಾಚಾರ್ಯರು ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದವರು. ಸಮಾಜದ ಶ್ರೇಯಸ್ಸಿಗೆ ಶ್ರಮಿಸಿದವರು ಎಂದು ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ತಿಳಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ವೈದ್ಧಿಕ ಕಾಲದಲ್ಲಿ ಮಹಿಳೆಯರಿಗೆ ಯಾವುದೇ ಆಚರಣೆಗಳಲ್ಲಿ ಅವಕಾಶಗಳಿಲ್ಲದಿರುವ ಕಾಲದಲ್ಲಿ ಅನೇಕ ರೀತಿಯಲ್ಲಿ ರೇಣುಕಾಚಾರ್ಯರು ಶ್ರಮಿಸಿದವರು. 

ರೇಣುಕಾಚಾರ್ಯರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದವರು, 18 ಸಮಾಜದ ಅಸ್ಪೃಶ್ಯರನ್ನು ಒಗ್ಗೂಡಿಸಿ, 18 ಮಠಗಳನ್ನು ನಿರ್ಮಿಸಿ ಜಾತಿ ಸಾಮರಸ್ಯವನ್ನು ಬೆಳೆಸಿದವರು. ಎಲ್ಲ ಸಮುದಾಯದ ಜನರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವುದರ ಮೂಲಕ ಅನೇಕ ತತ್ವಗಳನ್ನು ಪ್ರತಿಪಾದಿಸಿದ್ದಾರೆ ಎಂದು ಡಾ. ಗುರುದೇವಿ ಹುಲೆಪ್ಪನವರಮಠ ಅವರು ಉಪನ್ಯಾಸ ನೀಡಿದರು.

ಹಿಂದಿನ ಕಾಲದ ಮಹಾಪುರುಷರು ಬಹಳ ಕಷ್ಟ ಪಟ್ಟು ಸಮಾಜದ ಉನ್ನತಿಗಾಗಿ ಅನೇಕ ರೀತಿಯಲ್ಲಿ ಶ್ರಮಿಸಿದ್ದಾರೆ. ಸಮಾನತೆ, ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟುಕೊಂಡು ವಚನ, ಸಾಹಿತ್ಯವನ್ನು ರಚಿಸಿದ್ದಾರೆ. ನಾವೆಲ್ಲರೂ ಶರಣರ ಆಚಾರ ವಿಚಾರ ಮುಂದುವರೆಸುತ್ತಾ ಜೀವನದಲ್ಲಿ ಅಳವಡಿಸಿಕೊಂಡು, ಮುಂದಿನ ಪೀಳಿಗೆಗೂ ತಿಳಿಸಿಕೊಡುವುದು ಅಗತ್ಯವಿದೆ ಎಂದು ಬೆಳಗಾವಿ ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭ ಬೆಲ್ಲದ ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಉತ್ಸವ ಬೆಳಗಾವಿ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರಯ್ಯಾ ಸವಡಿ, ಸಮಾಜದ ಮುಖಂಡರಾದ ರೋಹನ್ ಜುವಳಿ, ಶ್ರೀಶೈಲ ಮಠದ, ವಿ.ಜಿ. ನೀರಲಗಿಮಠ, ಬೆಳಗಾವಿ ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ ಜಂಗಮ, ಬಣಜಿಗ, ಗಾಣಿಗ, ನೇಕಾರ ಹಾಗೂ ಎಲ್ಲ ವೀರಶೈವ ಉಪ ಪಂಗಡಗಳ ಸಮಾಜದ ಸಮಿತಿಗಳ ಮುಖಂಡರುಗಳು ಉಪಸ್ಥಿತರಿದ್ದರು.

ಭವ್ಯ ಮೆರವಣಿಗೆ ಕಾರ್ಯಕ್ರಮ:

ಕಾರ್ಯಕ್ರಮಕ್ಕೂ ಮುಂಚೆ ರಾಣಿ ಚನ್ನಮ್ಮ ವೃತ್ತದ ಬಳಿ
ಹುಕ್ಕೇರಿಯ ಶ್ರೀ ಗುರು ಶಾಂತೇಶ್ವರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿಮಠದ, ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.

ಮೆರವಣಿಗೆ ಚನ್ನಮ್ಮ ವೃತ್ತದಿಂದ ಶ್ರೀ ಕೃಷ್ಣದೇವರಾಯ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ರಂಗ ಮಂದಿರದವರೆಗೆ ತಲುಪಿತು. ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆ ವೇದ ಘೋಷ್ಯಗಳಿಂದ, ವಾದ್ಯ ಮೇಳಗಳಿಂದ ಅತೀ ವಿಜೃಂಭಣೆಯಿಂದ ಸಾಗಿತು.

Advertisement

Leave a reply

Your email address will not be published. Required fields are marked *

error: Content is protected !!